ಸಿಟಿ ‘ಸ್ಮಾರ್ಟ್’ ಆಗುವಾಗ ಕಸಾಯಿ ಖಾನೆಯೂ ‘ಸ್ಮಾರ್ಟ್’ ಆಗಲಿ
ಮಂಗಳೂರು, ಮಾ.4: ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರ ಸ್ಮಾರ್ಟ್ ಆಗುವಾಗ ಕುದ್ರೋಳಿ ಕಸಾಯಿ ಖಾನೆಯೂ ಸ್ಮಾರ್ಟ್ ಆಗಲಿ ಎಂದು ಜಮೀಯ್ಯತುಸ್ಸಅದಾ ಮಾಂಸ ವ್ಯಾಪಾರಸ್ಥರ ಸಂಘ ಆಗ್ರಹಿಸಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕುದ್ರೋಳಿ ಕಸಾಯಿಖಾನೆಯನ್ನು ಹೊಸ ಸ್ಮಾರ್ಟ್ ಕಸಾಯಿಖಾನೆಯನ್ನಾಗಿಸುವ ಪ್ರಕ್ರಿಯೆ ಕೈಬಿಡಬೇಕು ಎಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಒತ್ತಾಯಿಸಿದ ಹಿನ್ನಲೆಯಲ್ಲಿ ಮಾಂಸ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲಿ ಹಸನ್ ಕುದ್ರೋಳಿ ಈ ಹೇಳಿಕೆ ನೀಡಿದ್ದಾರೆ.
ಈ ಕಸಾಯಿಖಾನೆಯೂ ಅವೈಜ್ಞಾನಿಕ, ಕಾನೂನು ಬಾಹಿರವಾಗಿದೆ. ಇಲ್ಲಿ ನಿರಂತರ ಗೋಹತ್ಯೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹಲವಾರು ಗಲಭೆ ಕೂಡ ಇದು ಕಾರಣವಾಗಿದೆ. ಹಾಗಾಗಿ ಇದನ್ನು ಕೈ ಬಿಡಬೇಕು ಎಂದು ವಿಎಚ್‌ಪಿ ಮತ್ತು ಬಜರಂಗ ದಳದ ಪ್ರಮುಖರು ಸಚಿವರು, ಶಾಸಕರು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಲಿ ಹಸನ್, ಮಂಗಳೂರಿನ ಕಸಾಯಿ ಖಾನೆಗೆ ಸುಮಾರು 80 ವರ್ಷದ ಇತಿಹಾಸವಿದೆ. ಆರಂಭದಲ್ಲಿ ಇದು ಅತ್ತಾವರದಲ್ಲಿತ್ತು. ಬಳಿಕ ಕುದ್ರೋಳಿಗೆ ಸ್ಥಳಾಂತರಗೊಂಡಿತ್ತು. ಕುದ್ರೋಳಿಯ ಕಸಾಯಿಖಾನೆಯು 50 ವರ್ಷದ ಹಿಂದೆ ಸ್ಥಾಪಿಸಲಾಗಿತ್ತು. ಅದರ ನವೀಕರಣಕ್ಕಿಂತಲೂ ಸ್ಮಾರ್ಟ್ ಸಿಟಿ ಯೋಜನೆಯಡಿ ಪುನಃ ನಿರ್ಮಿಸಬೇಕಿದೆ. ನಗರವು ಸ್ಮಾರ್ಟ್ ಆಗುವಾಗ ಕಸಾಯಿ ಖಾನೆ ಸ್ಮಾರ್ಟ್ ಆಗಬೇಕು. ಇಲ್ಲದಿದ್ದರೆ ನಗರದ ಸೌಂದರ್ಯಕ್ಕೆ ಕಸಾಯಿಖಾನೆಯು ಅಡ್ಡಿಯಾಗಬಹುದು ಎಂದಿದ್ದಾರೆ.
ಕುದ್ರೋಳಿಯ ಕಸಾಯಿ ಖಾನೆಯಲ್ಲಿ ಆಡು, ಕುರಿ ಹಾಗು ಎತ್ತು, ಕೋಣವನ್ನು ವಧೆ ಮಾಡಲಾಗುತ್ತದೆ. ಇಲ್ಲಿ ಮಿತಿಗಿಂತ ಅಧಿಕ ಜಾನುವಾರುಗಳನ್ನು ವಧೆ ಮಾಡಲಾಗುತ್ತದೆ ಎಂಬ ಆರೋಪ ಒಂದೆಡೆಯಾದರೆ, ಮೂಲಭೂತ ಸೌಕರ್ಯವಿಲ್ಲದೆ ವಧಾಗೃಹ ನಲುಗುತ್ತಿದೆ ಎಂಬ ಮಾತು ಇನ್ನೊಂದೆಡೆಯಿಂದ ಕೇಳಿ ಬರುತ್ತಿದೆ.
ಜಾನುವಾರುಗಳ ವಧಾಗೃಹದ ಗುತ್ತಿಗೆಯನ್ನು ಜಮೀಯ್ಯತುಸ್ಸಅದಾ ಮಾಂಸ ವ್ಯಾಪಾರಸ್ಥರ ಸಂಘದ ಪರವಾಗಿ ಮುಸ್ಲಿಮರೇ ವಹಿಸಿಕೊಳ್ಳುತ್ತಿದ್ದರು. ಪ್ರತೀ ವರ್ಷ ಗುತ್ತಿಗೆ ವಹಿಸಿಕೊಳ್ಳಲು ಟೆಂಡರ್ ಕರೆಯಲಾಗುತ್ತಿತ್ತು.ಈ ಮಧ್ಯೆ ಕಸಾಯಿಖಾನೆಯನ್ನು ಮುಚ್ಚಬೇಕು ಎಂದು ಆಗ್ರಹಿಸುತ್ತಿದ್ದ ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರು ಕೆಲವು ವರ್ಷಗಳ ಹಿಂದೆ ಗುತ್ತಿಗೆ ವಹಿಸಿಕೊಂಡಿದ್ದರು. ಆದರೆ ಎರಡೇ ವಾರದೊಳಗೆ ವಹಿಸಿಕೊಂಡ ಗುತ್ತಿಗೆಯ ಜವಾಬ್ದಾರಿಯನ್ನು ಮುನ್ನಡೆಸಲಾಗದೆ ವಾಪಸ್ ನೀಡಿದ್ದರು. ಅದರಂತೆ 3 ತಿಂಗಳ ಕಾಲ ಮನಪಾ ಕಸಾಯಿಖಾನೆಯ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿತ್ತು. ಬಳಿಕ ನಡೆದ ಟೆಂಡರ್ ಪ್ರಕ್ರಿಯೆಯಂತೆ ಜಮೀಯ್ಯತುಸ್ಸಅದಾ ಮಾಂಸ ವ್ಯಾಪಾರಸ್ಥರ ಸಂಘ ಗುತ್ತಿಗೆ ವಹಿಸಿಕೊಂಡಿದೆ. ಅದೀಗಲೂ ಮುಂದುವರಿದಿದೆ.
ಸ್ಥಳಾಂತರ?: ಅತ್ತ ಸಂಘಪರಿವಾರದ ಸಂಘಟನೆಗಳು ಕಸಾಯಿ ಖಾನೆಯನ್ನು ಮುಚ್ಚಲು ಪಣತೊಟ್ಟರೆ ಇತ್ತ ಮನಪಾ ಅಧಿಕಾರಿಗಳು ಕಸಾಯಿ ಖಾನೆಯನ್ನು ನಗರದ ಹೊರಭಾಗಕ್ಕೆ ಸ್ಥಳಾಂತರಿಸಲು ಆಸಕ್ತಿ ವಹಿಸಿದ್ದರು. ಆದರೆ 10 ವರ್ಷ ಕಳೆದರೂ ಕೂಡ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಕಳೆದ ವಾರ ಮಂಗಳೂರಿಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಬಸವರಾಜು ಕಸಾಯಿಖಾನೆಯ ಸ್ಥಳಾಂತರದ ಸುಳಿವು ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲಿ ಹಸನ್, ಕುದ್ರೋಳಿ ಕಸಾಯಿಖಾನೆಯನ್ನು ಸ್ಥಳಾಂತರಕ್ಕೆ ಸಂಘದ ವಿರೋಧವಿಲ್ಲ. ಆದರೆ ಹೊಸ ಕಸಾಯಿಖಾನೆಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು, ಪ್ರಾಣಿಗಳ ಮತ್ತು ಮಾಂಸ ಸಾಗಾಟಕ್ಕೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.