ಗುರುಪುರ ಫಲ್ಗುಣಿ ತಟದಲ್ಲಿ ಶ್ರೀಮಹಾಕಾಲೇಶ್ವರ ಬಯಲು ಆಲಯ ಸಂಕಲ್ಪ
ಮಂಗಳೂರು, ಮಾ.4: ಗುರುಪುರ ಗೋಳಿದಡಿಗುತ್ತಿನ ಚಾವಡಿ ಸಮೀಪದ ಫಲ್ಗುಣಿ ನದಿ ತಟದಲ್ಲಿ ಶ್ರೀ ಮಹಾಕಾಲೇಶ್ವರ ಬಯಲು ಆಲಯ ನಿರ್ಮಾಣಗೊಳ್ಳಲಿದೆ. ಉತ್ತರ ಭಾರತದ ಉಜ್ಜೈನಿಯಲ್ಲಿ ಮಾತ್ರ ಮಹಾಕಾಲೇಶ್ವರ ದೇವಾಲಯವಿದ್ದು, ಗುರುಪುರದಲ್ಲಿ ನಿರ್ಮಾಣಗೊಳ್ಳಲಿರುವ ಶಿವನ ಈ ಏಕಶಿಲಾ ದೇವಾಲಯವು ದಕ್ಷಿಣ ಭಾರತದ ಪ್ರಥಮ ಶಿವಾಲಯವಾಗಲಿದೆ.
* ವೇಣೂರಿಂದ ಮೆರವಣಿಗೆ
ವೇಣೂರಿಗೆ ಹತ್ತಿರದ ಕಾಶಿಪಟ್ಣ ಗ್ರಾಮದ ಕಿರೋಡಿಯಲ್ಲಿ ಉತ್ಖನನ ಮಾಡಿ ಹೊರತೆಗೆಯಲಾದ 22 ಅಡಿ ಉದ್ದ, 9 ಅಡಿ ಅಗಲ ಹಾಗೂ 6 ಅಡಿ ದಪ್ಪಗಿನ ಏಕಶಿಲಾ ದಿಬ್ಬವನ್ನು ಮಾ. 9ರಂದು ಗುರುಪುರ ಗೋಳಿದಡಿಗುತ್ತಿನಲ್ಲಿ ಸಂಕಲ್ಪಿಸಿದಂತೆ ಮೆರವಣಿಗೆ ಮೂಲಕ ಗುರುಪುರಕ್ಕೆ ತರಲಾಗುವುದು. ಮುಂಜಾನೆ 5 ಗಂಟೆಗೆ ಟ್ರಾಲಿಯಲ್ಲಿಟ್ಟು ವೇಣೂರಿಂದ ಹೊರಡಲಿರುವ ಏಕಶಿಲಾ ಮೆರವಣಿಗೆ ಹೊಸಂಗಡಿ, ಮೂಡುಬಿದಿರೆ, ಮಿಜಾರು, ಎಡಪದವು, ಗಂಜಿಮಠ, ಕೈಕಂಬ, ಗುರುಪುರ ಜಂಕ್ಷನ್ ಮೂಲಕ ಸಂಜೆ 4 ಗಂಟೆಯೊಳಗೆ ಫಲ್ಗುಣಿ ನದಿ ತಟ ತಲುಪಲಿದೆ.
* ವಿಶಿಷ್ಟ ಬಯಲು ಆಲಯ
ಶ್ರೀ ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಗೋಳಿದಡಿಗುತ್ತು ಗುರುಪುರ ಇದರ ಆಡಳಿತ ಟ್ರಸ್ಟಿ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯ ಉಸ್ತುವಾರಿ,ಪ್ರಶಾಂತ್ ಜೆ. ಶೆಟ್ಟಿಯ ಅಧ್ಯಕ್ಷತೆ ಹಾಗೂ ಸ್ಥಳೀಯ ಸಂಸದ, ಶಾಸಕರು, ಸಮಾಜದ ಗಣ್ಯರ ಮುಂದಾಳತ್ವದ ಶ್ರೀ ಮಹಾಕಾಲೇಶ್ವರ ಸಾನಿಧ್ಯ ಪುನರುತ್ಥಾನ ಸಮಿತಿಯ ಮೂಲಕ ಪುನರುತ್ಥಾನಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ಬಯಲು ಆಲಯಕ್ಕೆ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆಎಸ್ ನಿತ್ಯಾನಂದ ಮಾರ್ಗದರ್ಶ ನೀಡಲಿದ್ದಾರೆ. 2022ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.