×
Ad

ಬೀಸುವ ದೊಣ್ಣೆಯಿಂದ ಮಧ್ಯಪ್ರದೇಶ ಸರಕಾರ ಪಾರು

Update: 2020-03-05 09:12 IST

ಭೋಪಾಲ್, ಮಾ.5: ಆಡಳಿತಾರೂಢ ಮೈತ್ರಿಕೂಟದ ಶಾಸಕರನ್ನು ಖರೀದಿಸುವ ಮೂಲಕ ಸರ್ಕಾರವನ್ನು ಪತನಗೊಳಿಸುವ ಬಿಜೆಪಿ ಪ್ರಯತ್ನ ವಿಫಲವಾಗಿದ್ದು, ಮಧ್ಯಪ್ರದೇಶದಲ್ಲಿ 14 ತಿಂಗಳ ಕಾಂಗ್ರೆಸ್ ಸರ್ಕಾರ ಅತಿದೊಡ್ಡ ಕಂಟಕದಿಂದ ಪಾರಾಗಿದೆ.

‘ನಾಪತ್ತೆ’ಯಾಗಿದ್ದ 10 ಶಾಸಕರ ಪೈಕಿ ಆರು ಮಂದಿ ಕಮಲನಾಥ್ ತೆಕ್ಕೆಗೆ ಬುಧವಾರ ಸಂಜೆ ವಾಪಸ್ಸಾಗಿದ್ದಾರೆ. ಆದರೆ ನಾಲ್ಕು ಮಂದಿ ಇನ್ನು ಕೂಡಾ ಬೆಂಗಳೂರಿನ ವೈಟ್‌ಫೀಲ್ಡ್‌ನ ಬಂಗಲೆಯೊಂದರಲ್ಲಿ ಬೀಡು ಬಿಟ್ಟಿದ್ದಾರೆ. ಆಡಳಿತ ಪಕ್ಷದ ಎಲ್ಲ ಸದಸ್ಯರು ಪಕ್ಷದ ಜತೆಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ.

"ನಮ್ಮ ಸರ್ಕಾರ ಸದನದಲ್ಲಿ ನಾಲ್ಕು ಬಾರಿ ಬಹುಮತ ಸಾಬೀತುಪಡಿಸಿ ಬಿಜೆಪಿಯನ್ನು ಸೋಲಿಸಿದೆ. ಇದೀಗ ಮತ್ತೆ ಅವರಿಗೆ ಸೋಲಾಗಿದೆ" ಎಂದು ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ. ಎರಡು ಸ್ಥಾನಗಳು ಖಾಲಿ ಇದ್ದು, 228 ಸದಸ್ಯಬಲದ ಸದನದಲ್ಲಿ ಬಹುಮತಕ್ಕೆ 115 ಶಾಸಕರ ಅಗತ್ಯವಿದೆ.

ಕಾಂಗ್ರೆಸ್ ಪಕ್ಷ 114 ಸದಸ್ಯರನ್ನು ಹೊಂದಿದೆ. ಆದಾಗ್ಯೂ ಕಮಲನಾಥ್ ಸರ್ಕಾರ ಆರಾಮವಾಗಿದೆ. ಬಿಎಸ್ಪಿ ಶಾಸಕರು, ಎಸ್ಪಿ ಶಾಸಕ ಹಾಗೂ ನಾಲ್ಕು ಮಂದಿ ಪಕ್ಷೇತರರ ಬೆಂಬಲ ಹೊಂದಿದೆ. ಬಿಜೆಪಿ ಬಳಿ ಇರುವ ಶಾಸಕರ ಸಂಖ್ಯೆ 107.

ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಮಧ್ಯಪ್ರದೇಶ ಸರ್ಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿತ್ತು. ಆರು, ಏಳು, ಎಂಟು ಮಂದಿ ಕಾಂಗ್ರೆಸ್ ಶಾಸಕರು ಗುರುಗಾಂವ್ ಹೋಟೆಲ್‌ನಲ್ಲಿ ಕ್ಷಿಪ್ರಕ್ರಾಂತಿಗೆ ಸಜ್ಜಾಗಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಶಾಸಕರ ಇಚ್ಛೆಗೆ ವಿರುದ್ಧವಾಗಿ ಶಾಸಕರನ್ನು ಬಿಜೆಪಿ ಹಿಡಿದಿಟ್ಟುಕೊಂಡಿದೆ ಎಂದು ಕಾಂಗ್ರೆಸ್ ಆಪಾದಿಸಿತ್ತು. ದಿಗ್ವಿಜಯ ಸಿಂಗ್ ಅವರು ಹೋಟೆಲ್‌ನತ್ತ ಧಾವಿಸಿದರೂ ಪ್ರವೇಶಕ್ಕೆ ಅವಕಾಶ ಆಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News