ದಿಲ್ಲಿ ಹಿಂಸಾಚಾರ ಪೂರ್ವಯೋಜಿತ, ಏಕಪಕ್ಷೀಯ: ಸತ್ಯಶೋಧನಾ ವರದಿ

Update: 2020-03-05 04:06 GMT

ಹೊಸದಿಲ್ಲಿ, ಮಾ.5: ಕಳೆದ ತಿಂಗಳು ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಏಕಪಕ್ಷೀಯ ಮತ್ತು ಪೂರ್ವಯೋಜಿತ. ಸ್ಥಳೀಯರ ಬೆಂಬಲದೊಂದಿಗೆ ಮುಸ್ಲಿಮರ ಮನೆಗಳು ಮತ್ತು ಮಳಿಗೆಗಳ ಮೇಲೆ ದಾಳಿ ಮಾಡಿ ಗರಿಷ್ಠ ಹಾನಿ ಮಾಡಲಾಗಿದೆ ಎಂದು ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಸತ್ಯಶೋಧನಾ ವರದಿಯಿಂದ ಬಹಿರಂಗವಾಗಿದೆ.

ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ಫೆಬ್ರವರಿ 23ರಂದು ಮಾಡಿದ ಭಾಷಣದ ಬಳಿಕ ಹಿಂಸಾಚಾರ ಭುಗಿಲೆದ್ದಿತು ಎಂದು ಖಜೂರಿ ಖಾಸ್ ಪ್ರದೇಶದ ನಾಗರಿಕರು ವಿವರಿಸಿದ್ದಾಗಿ ದಿಲ್ಲಿ ಅಲ್ಪಸಂಖ್ಯಾತರ ಆಯೋಗ ಕಾಯ್ದೆ-1999ರಡಿ ರಚಿಸಲಾದ ಆಯೋಗ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ದೊಂಬಿ ಘಟನೆಗಳ ಪರಿಣಾಮವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಗುಂಪುಗಳು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಬಳಸಿವೆ. ಬಹಳಷ್ಟು ಮನೆ ಮತ್ತು ಮಳಿಗೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಗಿದೆ ಎಂದೂ ಎರಡು ಪುಟಗಳ ವರದಿಯಲ್ಲಿ ವಿವರಿಸಲಾಗಿದೆ.

ದಿಲ್ಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯನ್ನು ನಿಭಾಯಿಸಿದ ಪೊಲೀಸ್ ಕ್ರಮದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರೂ, ಕೋಮು ಹಿಂಸಾಚಾರದ ವೇಳೆ ಪೊಲೀಸರು ನಡೆಸಿದ ಪರಿಹಾರ ಕಾರ್ಯಾಚರಣೆಯನ್ನು ವರದಿಯಲ್ಲಿ ಶ್ಲಾಘಿಸಲಾಗಿದೆ. ಕಳೆದ ವಾರದ ಹಿಂಸಾಚಾರ ಸಂತ್ರಸ್ತರ ಕುಟುಂಬಕ್ಕೆ ನೆರವಾಗುವ ಸಲುವಾಗಿ ಘೋಷಿಸಿದ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದೂ ಸಲಹೆ ಮಾಡಿದೆ. ಗಲಭೆಯಲ್ಲಿ ಒಟ್ಟು 47 ಮಂದಿ ಮೃತಪಟ್ಟು, 422 ಮಂದಿ ಗಾಯಗೊಂಡಿದ್ದರು. ಮೃತಪಟ್ಟವರ ಪೈಕಿ ಕನಿಷ್ಠ 28 ಮಂದಿ ಮುಸ್ಲಿಮರು ಸೇರಿದ್ದಾರೆ.

"ನಮ್ಮ ಅಂದಾಜಿನ ಪ್ರಕಾರ ಈಶಾನ್ಯ ದಿಲ್ಲಿ ಹಿಂಸಾಚಾರ ಏಕಪಕ್ಷೀಯ ಮತ್ತು ಪೂರ್ವ ನಿಯೋಜಿತ. ಮುಸ್ಲಿಮರ ಮನೆಗಳು ಮತ್ತು ಮಳಿಗೆಗಳಿಗೆ ಗರಿಷ್ಠ ಹಾನಿಯಾಗಿವೆ. ದೊಡ್ಡ ಪ್ರಮಾಣದ ನೆರವು ಇಲ್ಲದೇ ಸಂತ್ರಸ್ತರ ಕುಟುಂಬಗಳು ತಮ್ಮ ಬದುಕು ಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ದಿಲ್ಲಿ ಸರಕಾರ ಘೋಷಿಸಿರುವ ಪರಿಹಾರ ಮೊತ್ತ ಅಸಮರ್ಪಕ" ಎಂದು ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News