ಶಂಕಿತ ಕೊರೋನ: ಕಾರ್ಕಳದ ವ್ಯಕ್ತಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು
ಉಡುಪಿ, ಮಾ.5: ಇಸ್ರೇಲಿನಿಂದ ಹಿಂದಿರುಗಿದ ಕಾರ್ಕಳ ತಾಲೂಕು ಮುನಿಯಾಲಿನ 75ರ ಹರೆಯ ವ್ಯಕ್ತಿಯೊಬ್ಬರು ಶಂಕಿತ ಕೊರೋನ ವೈರಸ್ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿರುವ ಪ್ರತ್ಯೇಕಿತ ವಾರ್ಡ್‌ಗೆ ಕಳೆದ ರಾತ್ರಿ ದಾಖಲಾಗಿದ್ದಾರೆ.
ತನ್ನ ಪತ್ನಿಯೊಂದಿಗೆ ಇಸ್ರೇಲಿನಲ್ಲಿ ಉದ್ಯೋಗದಲ್ಲಿರುವ ಪುತ್ರನ ಬಳಿ ತೆರಳಿದ್ದ ಇವರು ಬುಧವಾರ ಅಪರಾಹ್ನವಷ್ಟೇ ಸ್ವದೇಶಕ್ಕೆ ಮರಳಿದ್ದರು. ಕೆಮ್ಮು ಹಾಗೂ ನೆಗಡಿ ಇದ್ದ ಇವರ ಬಗ್ಗೆ ಮಾಹಿತಿ ಪಡೆದ ಜಿಲ್ಲಾಸ್ಪತ್ರೆಯ ಕಾರ್ಯಪಡೆ, ಅವರ ಮನೆಗೆ ತೆರಳಿ ತಡ ರಾತ್ರಿ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ತೆರೆದಿರುವ ವಿಶೇಷ ವಾರ್ಡ್‌ಗೆ ದಾಖಲು ಮಾಡಿದೆ.
ಇದೀಗ 75ರ ಹರೆಯದ ವ್ಯಕ್ತಿಯ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಯೋಗಾಲಯಕ್ಕೆ ಈಗಾಗಲೇ ರವಾನಿಸಲಾಗಿದೆ. ಶನಿವಾರದೊಳಗೆ ಇದರ ಪರೀಕ್ಷಾ ವರದಿ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಸ್ಪತ್ರೆ ಮೂಲಗಳು ತಿಳಿಸಿವೆ.
ವೃದ್ಧರು ಅಧಿಕ ರಕ್ತದೊತ್ತಡ, ಮಧುಮೇಹದೊಂದಿಗೆ ಲಘುವಾದ ಅಸ್ತಮಾ ಸಮಸ್ಯೆಯನ್ನು ಹೊಂದಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಾವು ಅವರನ್ನು ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡ್‌ಗೆ ದಾಖಲು ಮಾಡಿದ್ದೇವೆ. ಅವರೊಂದಿಗೆ ತೆರಳಿದ್ದ ಪತ್ನಿ ಸಂಪೂರ್ಣ ಆರೋಗ್ಯದಿಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.