ಪುತ್ತೂರು: ಮುಸುಕುಧಾರಿಗಳಿಂದ ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ; ಆಸ್ಪತ್ರೆಗೆ ದಾಖಲು

Update: 2020-03-05 11:43 GMT

ಪುತ್ತೂರು: ಬೈಕ್‍ನಲ್ಲಿ ತೆರಳುತ್ತಿದ್ದ ಯುವಕನೊಬ್ಬನನ್ನು ನಾಲ್ವರು ಮುಸುಕುಧಾರಿಗಳು ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದು ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ಪುತ್ತೂರು-ಕಾಣಿಯೂರು ರಸ್ತೆಯ ಸರ್ವೆ ಎಂಬಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಗೋಳಿತ್ತಡಿ ನಿವಾಸಿ ವೆಂಕಪ್ಪ ಗೌಡ ಎಂಬವರ ಪುತ್ರ ರಂಜಿತ್(22) ಹಲ್ಲೆಗೆ ಒಳಗಾದ ಯುವಕ. ರಂಜಿತ್ ಅವರು ಬಜರಂಗದಳದ ಪುತ್ತೂರು ನಗರ ಸಾಪ್ತಾಹಿಕ ಪ್ರಮುಖ್ ಆಗಿದ್ದು, ಬುಧವಾರ ರಾತ್ರಿ ಸವಣೂರಿನಲ್ಲಿರುವ ತನ್ನ ಅಜ್ಜಿ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿಕೊಂಡು ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಸರ್ವೆ ಎಂಬಲ್ಲಿ ಅವರ ಬೈಕನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

'ನಾನು ಪುತ್ತೂರಿನ ದರ್ಬೆಯಿಂದ ಸವಣೂರಿನಲ್ಲಿರುವ ಅಜ್ಜಿ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಹಿಂದಿನಿಂದ ಬೈಕ್‍ನಲ್ಲಿ ಬಂದ ನಾಲ್ವರು ಮುಸುಕುಧಾರಿಗಲು ನನ್ನ ಬೈಕ್‍ಗೆ ಕಾಲಿನಿಂದ ತುಳಿದಿದ್ದಾರೆ. ಆಗ ನಾನು ಹತೋಟಿ ತಪ್ಪಿ ಬೈಕ್ ಸಮೇತ ರಸ್ತೆಗೆ ಬಿದ್ದಾಗ ಅಲ್ಲಿಗೆ ಬಂದ ಆ ನಾಲ್ವರು ಕೈಯಲ್ಲಿ ತಲುವಾರು ಹಿಡಿದುಕೊಂಡು ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಅಟೋರಿಕ್ಷಾದ ಕಡೆಗೆ ನಾನು ಓಡಿ ಹೋಗಿ ರಕ್ಷಣೆ ಪಡೆದುಕೊಂಡೆ. ಬಳಿಕ ಅದೇ ರಿಕ್ಷಾದಲ್ಲಿ ನನ್ನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಹಲ್ಲೆಗೆ ಒಳಗಾದ ರಂಜಿತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News