ಪುತ್ತೂರು: ರಾಷ್ಟ್ರಮಟ್ಟದ ಏರೋಡಿಸೈನ್ ಚಾಲೆಂಜ್-5 ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜು ಪ್ರಥಮ

Update: 2020-03-05 12:32 GMT

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಜಟಾಯು ಏರೋವಿಂಗ್ ತಂಡವು ನಿರ್ಮಿಸಿದ ದೂರ ನಿಯಂತ್ರಿತ ವಿಮಾನದ ಮಾದರಿಯು ರಾಷ್ಟ್ರಮಟ್ಟದ ಎಸ್‍ಎಇ ಏರೋಡಿಸೈನ್ ಚಾಲೆಂಜ್-5 ಸ್ಪರ್ಧೆಯಲ್ಲಿ ಅತ್ಯುತ್ತಮ ನವೀನ ವಿನ್ಯಾಸ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ಪಡೆದು ರೂಪಾಯಿ 10 ಸಾವಿರ ನಗದು ಬಹುಮಾನವನ್ನು ಗಳಿಸಿಕೊಂಡಿದೆ.

ಕೊಯಮುತ್ತೂರಿನ ಬನ್ನಾರಿ ಅಮ್ಮನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶಾದ್ಯಂತ ಆಯ್ದ 139 ಇಂಜಿನಿಯರಿಂಗ್ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಮೌಖಿಕ ಪ್ರಸ್ತುತಿ, ತಾಂತ್ರಿಕ ಪರಿಶೀಲನೆ ಮತ್ತು ಹಾರಾಟ ಪರೀಕ್ಷೆ ಎನ್ನುವ 3 ವಿಭಾಗದಲ್ಲಿ ಪರೀಕ್ಷೆಗಳು ನಡೆದು ಒಟ್ಟು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗಿತ್ತು. ಅದರಲ್ಲಿ ಅತ್ಯುತ್ತಮ ನವೀನ ವಿನ್ಯಾಸ ವಿಭಾಗದಲ್ಲಿ ಈ ತಂಡವು ಪ್ರಥಮ ಪ್ರಶಸ್ತಿಯನ್ನು ಪಡೆದು ನಗದು ಬಹುಮಾನವನ್ನು ಗಳಿಸಿಕೊಂಡಿದೆ.

ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಅವರ ಸಲಹೆ ಸೂಚನೆಗಳ ಮೇರೆಗೆ ಸಹಾಯಕ ಪ್ರಾಧ್ಯಾಪಕ ಫ್ರೊ.ಅಜಿತ್.ಕೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಕ್ಷಯಕುಮಾರ್, ರೂಪೇಶ್ ಆಚಾರ್ಯ, ಸೃಜನ್.ಪಿ, ಸ್ವೀಕೃತ್.ರೈ, ಪ್ರಸನ್ನ, ಸ್ವಸ್ತಿಕ್.ಎಂ ಹಾಗೂ ಶರತ್ ಶಶಿಧರನ್ ಈ ದೂರ ನಿಯಂತ್ರಿತ ವಿಮಾನದ ಮಾದರಿಯನ್ನು ನಿರ್ಮಿಸಿದ್ದರು ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News