ರಾಜ್ಯ ಬಜೆಟ್ 2020: ಗಣ್ಯರ ಪ್ರತಿಕ್ರಿಯೆಗಳು ಹೀಗಿವೆ...

Update: 2020-03-05 14:06 GMT

ಜನಹಿತ ಮತ್ತು ಜನಮತ

ಕೃಷಿಗೆ ಕೊಟ್ಟಿರುವ ಪ್ರಾಧಾನ್ಯತೆ, ಮಕ್ಕಳು ಮತ್ತು ಮಹಿಳಾ ಸಬಲಿಕರಣದತ್ತ ಗಮನ, ನೀರಾವರಿಗೆ ಹಾಗೂ ಕುಡಿಯುವ ನೀರಿಗೆ ಅಪಾರ ಅನುದಾನವೂ ಸೇರಿದಂತೆ, ಕರಾವಳಿ ಜಿಲ್ಲೆಯಲ್ಲಿ ಮೀನುಗಾರಿಕೆ ಮತ್ತು ಬಂದರಿಗೆ ಕೊಟ್ಟಿರುವ ಅಪಾರ ಅನುದಾನ ನೀಡಿರುವುದರಿಂದ ಮುಖ್ಯಮಂತ್ರಿ ಮಂಡಿಸಿರುವ ಈ ಬಜೆಟ್ ಜನಹಿತ ಮತ್ತು ಜನಮತವಾಗಿದೆ.

ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವರು ದ.ಕ.ಜಿಲ್ಲೆ

**********

ಉತ್ತಮ ಬಜೆಟ್ 

ಮುಖ್ಯಮಂತ್ರಿ ಮಂಡಿಸಿದ ರಾಜ್ಯ ಬಜೆಟ್ ಅತ್ಯುತ್ತಮ ಬಜೆಟ್ ಆಗಿದೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ, ಕೃಷಿಕರಿಗೆ, ಜನಸಾಮಾನ್ಯರಿಗೆ, ಮೀನುಗಾರರಿಗೆ, ಮಹಿಳಾ ಮತ್ತು ಕಟ್ಟಡ ಕಾರ್ಮಿಕರಿಗೆ, ಆರೋಗ್ಯ ಕ್ಷೇತ್ರಕ್ಕೆ, ಪ್ರವಾಸೋದ್ಯಮ ಮತ್ತು ವಿವಿಧ ನಿಗಮಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಮಹಿಳಾ ಮೀನುಗಾರರ ಸಬಲೀಕರಣಕ್ಕಾಗಿ 1.5 ಕೋ.ರೂ. ಅನುದಾನದಲ್ಲಿ ಮತ್ಸ ವಿಕಾಸ ಯೋಜನೆ, ಮಹಿಳಾ ಮೀನುಗಾರರಿಗೆ 5 ಕೋ.ರೂ. ವೆಚ್ಚದಲ್ಲಿ ದ್ವಿಚಕ್ರ ವಾಹನ, ಹಿನ್ನೀರು ಮೀನುಗಾರಿಕೆ ಅಭಿವೃದ್ಧಿ, 1 ಲಕ್ಷ ಕಟ್ಟಡ ಕಾರ್ಮಿಕರಿಗೆ ಮುಖ್ಯಮಂತ್ರಿ ಆರೋಗ್ಯ ಸುರಕ್ಷಾ ಯೋಜನೆ, ಕಟ್ಟಡ ಕಾರ್ಮಿಕರಿಗೆ ಉಚಿತ ಪ್ರಿ ಪೇಯ್ಡ್ ಹೆಲ್ತ್ ಕಾರ್ಡ್ ಯೋಜನೆ, ಕಟ್ಟಡ ಕಾರ್ಮಿಕರಿಗೆ 10 ಮೊಬೈಲ್ ಕ್ಲಿನಿಕ್, ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋ.ರೂ., ನವ ನಗರೋತ್ಥಾನ ಯೋಜನೆಗೆ 8,344 ಕೋ.ರೂ., ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋ.ರೂ., ಕಿಡ್ನಿ ವೈಫಲ್ಯ ಹೊಂದಿದವರಿಗೆ ಉಚಿತ ಪೆರಿಟೋನಿಯಲ್ ಡಯಾಲೀಸಿಸ್ ಯೋಜನೆ, ಸಂಚಾರಿ ಹೆಲ್ತ್ ಕ್ಲಿನಿಕ್, ಕೃಷಿ ಯೋಜನೆಯ ಅಭಿವೃದ್ಧಿಗೆ 32,259 ಕೋ.ರೂ. ಅನುದಾನ ಸಹಿತ ವಿವಿಧ ಯೋಜನೆಗಳಿಗೆ ಅನುದಾನ ನೀಡಿದ್ದಾರೆ.

ವೇದವ್ಯಾಸ ಕಾಮತ್, ಶಾಸಕರು

**********

ಎಟಿಎಫ್ ವ್ಯಾಟ್ ಕಡಿತಗೊಳಿಸಿಲ್ಲ

ಮಂಗಳೂರು ವಿಮಾನ ನಿಲ್ದಾಣಕ್ಕೆ ಎಟಿಎಫ್ ವ್ಯಾಟ್ ಕಡಿತ ಮಾಡಬೇಕು ಎಂಬ ನಮ್ಮ ಬೇಡಿಕೆ ಈಡೇರಿಲ್ಲ. ಎಟಿಎಫ್ ವ್ಯಾಟ್ ಕಡಿತಗೊಳಿಸಿದ್ದರೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವವರಿಗೆ ಅನುಕೂಲ ಆಗುತ್ತಿತ್ತು. ರಾಜ್ಯ ಬಜೆಟ್‌ನಲ್ಲಿ ಕೃಷಿ ಉತ್ಪನ್ನ ಅಭಿವೃದ್ಧಿಗೆ ನೀರಾವರಿ ಸಹಿತ ಹಲವು ಯೋಜನೆಗಳನ್ನು ನೀಡಿರುವುದು ಸ್ವಾಗತಾರ್ಹ. ಇದರಿಂದ ರೈತರ ಅಭಿವೃದ್ಧಿ ಆಗುವುದಲ್ಲದೆ ದೇಶದ ಒಟ್ಟು ಆರ್ಥಿಕತೆಯ ಬೆಳವಣಿಗೆಗೂ ಕೊಡುಗೆ ಲಭ್ಯವಾಗಲಿದೆ. ಕೃಷಿ ರಂಗಕ್ಕೆ ಒದಗಿಸಿರುವ ಯೋಜನೆಗಳು ಮತ್ತು ಮೀಸಲಿರಿಸಿದ ಹಣ ಸಮರ್ಪಕವಾಗಿ ಖರ್ಚಾದರೆ ರೈತರಿಗೂ ಅನುಕೂಲ, ಉದ್ಯೋಗ ಸೃಷ್ಟಿಯೂ ಆಗುವುದಲ್ಲದೆ ಉದ್ಯಮ ರಂಗಕ್ಕೂ ಪ್ರಯೋಜನ ಲಭ್ಯವಾಗಲಿದೆ.

ಐಸಾಕ್ ವಾಸ್, ಅಧ್ಯಕ್ಷರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮಂಗಳೂರು

*********

ಬಲಪಂಥೀಯ ನೀತಿಯ ಪ್ರದರ್ಶನ

ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿರುವ ರಾಜ್ಯ ಬಜೆಟ್‌ನಿಂದ ಜನಸಾಮಾನ್ಯರು ಭಾದೆಗೊಳಗಾಗಲಿದ್ದಾರೆ. ಈಗಾಗಲೆ ರಾಜ್ಯ ಸಾರಿಗೆ ಸಂಸ್ಥೆಯು ಬಸ್ ದರ ಏರಿಕೆ ಮಾಡಿದೆ. ಅದರೊಂದಿಗೆ ಈ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನೂ ಏರಿಸಲಾಗಿದೆ. ಇವೆರಡೂ ಸೇರಿದಾಗ ಬೆಲೆಯೇರಿಕೆ ಅತ್ಯಂತ ಜಾಸ್ತಿಯಾಗಲಿದೆ. ಇದರಿಂದ ಜನಸಾಮಾನ್ಯರು ಬಳಲಲಿದ್ದಾರೆ. ಕೈಗಾರಿಕಾ ವಲಯಕ್ಕೆ ಹೆಚ್ಚಿನ ಆದ್ಯತೆ ಕೊಡದ ಕಾರಣ ನಿರುದ್ಯೋಗ ಹೆಚ್ಚಲಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯಾವುದೇ ಆದ್ಯತೆ ನೀಡದ ಕಾರಣ ಯುವಜನರು ಮತ್ತಷ್ಟು ಸಂಕಷ್ಟಗೊಳಗಾಗಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾದ ಅನಾಹುತಗಳಿಗೆ ಸ್ಪಂದಿಸಲು ಹಣಕಾಸಿನ ಕೊರತೆ ಸಾಕಷ್ಟಿದೆ. ಕೇಂದ್ರವೂ ಈ ಬಗ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಜೆಟ್‌ನಲ್ಲಿ ಅದಕ್ಕಾಗಿ ಹಣ ಕಾದಿರಿಸುವ ಅಗತ್ಯವಿತ್ತು. ಆದರೆ ಬಜೆಟ್‌ನಲ್ಲಿ ಅಂತಹ ಸೂಚನೆಗಳು ಎಲ್ಲೂ ಕಾಣುತ್ತಿಲ್ಲ. ಒಟ್ಟಾರೆಯಾಗಿ ಈ ಬಜೆಟ್ ಮೂಲಕ ಸರಕಾರ ಮತ್ತೊಮ್ಮೆ ತನ್ನ ಬಲಪಂಥೀಯ ನೀತಿಯನ್ನು ಪ್ರದರ್ಶಿಸಿದೆ.

ವಿ. ಕುಕ್ಯಾನ್, ಕಾರ್ಯದರ್ಶಿ ಸಿಪಿಐ ದ.ಕ.ಜಿಲ್ಲೆ

************

ಉದ್ಯಮಕ್ಕೆ ಉತ್ತೇಜನಕಾರಿ ಬಜೆಟ್

ರಾಜ್ಯ ಸರಕಾರದ ಬಜೆಟ್ ಉದ್ಯಮಕ್ಕೆ ಉತ್ತೇಜನಕಾರಿಯಾಗಿದೆ. ರಾಜ್ಯದ ಹೂಡಿಕೆದಾರರನ್ನು ಉತ್ತೇಜಿಸಲು, ಕೈಗಾರಿಕೆಗಳ ಸ್ಥಾಪನೆಗೆ ಗುರುತಿಸಲಾದ ಸ್ಥಳದಲ್ಲಿ ಭೂ ಮಾಲಕರಿಂದ ನೇರವಾಗಿ ಭೂಮಿಯನ್ನು ಖರೀದಿಸಲು ಅನುವು ಮಾಡಿಕೊಡುವ ಸಲುವಾಗಿ ಸಂಬಂಧಿತ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ನಿಯಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿರುವುದು ರಾಜ್ಯದ ಹೂಡಿಕೆ ವಾತಾವರಣದಲ್ಲಿ ಬದಲಾವಣೆಗೆ ದೊಡ್ಡ ಹೆಜ್ಜೆಯಾಗಲಿದೆ. ರಾಜ್ಯದ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಸ್ಮಾರ್ಟ್ ಉತ್ಪಾದನಾ ತಂತ್ರಜ್ಞಾನವನ್ನು ಪೂರೈಸಲು ಕೈಗಾರಿಕೆಗಳ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸ್ಮಾರ್ಟ್ ಉತ್ಪಾದನಾ ಕೇಂದ್ರ ಸಂಸ್ಥೆಯನ್ನು ಸ್ಥಾಪಿಸುವ ಪ್ರಸ್ತಾಪವು ಪ್ರಶಂಶನೀಯ.

ಬಿ.ಎ. ನಝೀರ್, ಅಧ್ಯಕ್ಷರು ಕೆನರಾ ಪ್ಲಾಸ್ಟಿಕ್ ತಯಾರಕರು ಮತ್ತು ವ್ಯಾಪಾರಿಗಳ ಸಂಘ ಮಂಗಳೂರು

*********

ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯ

ಕೇಂದ್ರ ಸರಕಾರದ ಅನುದಾನವನ್ನು ಪಡೆಯಲು ವಿಫಲವಾದ ರಾಜ್ಯ ಸರಕಾರವು ರಾಜ್ಯದ ಜನತೆಯ ಮೇಲೆ ತೆರಿಗೆಯ ಹೊರೆ ಹೊರಿಸಿ ಪ್ರಗತಿಯ ಹಿನ್ನಡೆಗೆ ಕಾರಣವಾಗಿದೆ. ರಾಜ್ಯದ ಅರ್ಥವ್ಯವಸ್ಥೆಯಲ್ಲಿ ಹಿಂದೆಂದೂ ಕಾಣದ ಕಳಪೆ ಬಜೆಟ್ ಇದಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷವು ಅಧಿಕಾರದಲ್ಲಿದ್ದರೆ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದ ಬಿಜೆಪಿ ರೈತರ ಪರ ಬಜೆಟ್ ಮಂಡಿಸುವುದಾಗಿ ಹೇಳಿಕೊಂಡಿದ್ದರೂ, ರಾಜ್ಯದ ಎಲ್ಲಾ ಇಲಾಖೆಗಳ ಅನುದಾನ ಕಡಿತಗೊಳಿಸಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಪ್ರಗತಿಯ ದಿಕ್ಕನ್ನು ಬದಲಾಯಿಸಿದೆ. 15ನೇ ಹಣಕಾಸಿನ ಆಯೋಗದ ವರದಿಯನ್ನು 11,215 ಕೋ.ರೂ. ಕಡಿಮೆಯಾಗಿದೆ. ಅಲ್ಪಸಂಖ್ಯಾತರಿಗೆ ಯಾವುದೇ ಯೋಜನೆಯನ್ನು ಪ್ರಕಟಿಸದೆ 400 ಉರ್ದು ಶಾಲೆಗಳಲ್ಲಿ ಇಂಗ್ಲಿಷ್ ಭಾಷೆ ಕಲಿಸಲು ಕಡಿಮೆ ಅನುದಾನ ಮೀಸಲಿಟ್ಟಿರುವುದು ವಿಪರ್ಯಾಸ. ಕಳೆದ ಬಜೆಟ್‌ನಲ್ಲಿ ಕ್ರೈಸ್ತ ಸಮುದಾಯಕ್ಕೆ 200 ಕೋ.ರೂ. ಅನುದಾನ ಘೋಷಿಸಿದ್ದರೂ 1 ರೂ.ನ್ನು ಬಿಡುಗಡೆ ಮಾಡದೆ ಪುನಃ 200 ಕೋ.ರೂ. ಘೋಷಣೆ ಮಾಡಿರುವುದು ಹಾಸ್ಯಾಸ್ಪದ.

ಐವನ್ ಡಿಸೋಜ, ಸದಸ್ಯರು, ವಿಧಾನ ಪರಿಷತ್

*************

ತೃಪ್ತಿದಾಯಕ ಬಜೆಟ್

ಜನರ ಮೂಲಭೂತ ಸೌಲಭ್ಯಗಳಿಗೆ ಒತ್ತುಕೊಟ್ಟು ಮಂಡಿಸಿದ ಈ ಬಜೆಟ್ ತೃಪ್ತಿದಾಯಕ. ಕೃಷಿ, ನೀರಾವರಿ, ಮೀನುಗಾರಿಕೆ, ನಗರಾಭಿವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಕಾರ್ಮಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ.

ಸುದರ್ಶನ ಎಂ. ಅಧ್ಯಕ್ಷರು, ದ.ಕ.ಜಿಲ್ಲಾ ಬಿಜೆಪಿ

********

ನೀರಸ ಬಜೆಟ್

ಇದು ಅತ್ಯಂತ ನೀರಸ ಮತ್ತು ಕಳಪೆ ಬಜೆಟ್. ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೊರಿಸಲಾಗಿದೆ. ಯಾವುದೇ ಹೊಸ ಯೋಜನೆಗಳಿಲ್ಲ. ಅಧಿಕ ಸಂಖ್ಯೆಯ ಬಿಜೆಪಿ ಶಾಸಕರನ್ನು ನೀಡಿದ ಕರಾವಳಿಗಂತೂ ಹೊಸ ಕೊಡುಗೆಯೇ ಇಲ್ಲ.

ಮುಹಮ್ಮದ್ ಕುಂಞಿ ವಿಟ್ಲ, ಅಧ್ಯಕ್ಷರು, ದ.ಕ.ಜಿಲ್ಲಾ ಜನತಾ ದಳ

********

ಕ್ರೈಸ್ತ ಸಮುದಾಯಕ್ಕೆ ಒತ್ತು

2011-12ರ ಬಜೆಟ್‌ನಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರೈಸ್ತ ಸಮುದಾಯಕ್ಕಾಗಿ 50 ಕೋ.ರೂ. ಮೀಸಲಿರಿಸಿದ್ದರು. ಇದೀಗ ಪ್ರಸ್ತುತ ವರ್ಷ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200 ಕೋ.ರೂ.ಮೀಸಲಿರಿಸಿದ್ದಾರೆ. ಮುಖ್ಯಮಂತ್ರಿಯ ಈ ಘೋಷಣೆಯನ್ನು ಕ್ರೈಸ್ತ ಸಮುದಾಯವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.

ಜೋಯ್ಲಸ್ ಡಿಸೋಜ, ಅಧ್ಯಕ್ಷರು, ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ರಾಜ್ಯ ಸರಕಾರ

*********

ನಿರೀಕ್ಷೆ ಹುಸಿ

ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್ ಜನಸಾಮಾನ್ಯರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದಾರೆ. ಇದರಿಂದ ಎಲ್ಲಾ ವಸ್ತುಗಳಿಗೂ ಬೆಲೆ ಅಧಿಕವಾಗಲಿದೆ. ಇದು ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆಗೆ ಯಾವುದೇ ವಿಶೇಷ ಕೊಡುಗೆ ನೀಡದೆ ಅನ್ಯಾಯ ಎಸಗಿದ್ದಾರೆ.

ಅಬ್ದುಲ್ ರವೂಫ್, ವಿಪಕ್ಷ ನಾಯಕ ಮಂಗಳೂರು ಮಹಾನಗರ ಪಾಲಿಕೆ

**************

ಯುವ ಜನತೆಯನ್ನು ಕಡೆಗಣಿಸಿದ ಬಜೆಟ್  

ಮುಖ್ಯಮಂತ್ರಿ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ರೀತಿಯ ರಚನಾತ್ಮಕ ಹೊಸತನವಿಲ್ಲ. ಕೇವಲ ಬಣ್ಣದ ಮಾತುಗಳೇ ತುಂಬಿವೆ.

ಮತ್ಸ್ಯ ಕ್ಷಾಮದಿಂದ ಪರದಾಡುತ್ತಿರುವ ಕರಾವಳಿಯ ಮತ್ಸ್ಯೋದ್ಯಮಕ್ಕೆ ಯಾವುದೇ ಪರಿಹಾರ ಈ ಬಜೆಟ್‌ನಲ್ಲಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ನೇರವಾಗಿ ಜನ ಸಾಮಾನ್ಯರ ಜೀವನದ  ಮೇಲೆ ದುಷ್ಪರಿಣಾಮ ಬೀಳಲಿದೆ. ಕೇಂದ್ರ ಸರಕಾರರದ ಮಲತಾಯಿ ಧೋರಣೆಯನ್ನು ಪ್ರಶ್ನಿಸದ ರಾಜ್ಯ ಸರಕಾರ ತನ್ನ ಅಸಹಾಯಕತೆಯ ದುಸ್ಥಿತಿ ಜನರ ಮುಂದೆ ವ್ಯಕ್ತವಾಗದಿರಲಿ ಎಂಬ ಏಕೈಕ ಉದ್ದೇಶದೊಂದಿಗೆ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಮಾಡಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿದ್ದು ಕೇವಲ ತೋರಿಕೆಯ ನಟನೆ ಮಾಡಿದೆ.

ಒಟ್ಟಾರೆ ಇದು ನಿರಾಶದಾಯಕ ಬಜೆಟ್ ಆಗಿದೆ

ಇಲ್ಯಾಸ್ ಮುಹಮ್ಮದ್ ತುಂಬೆ, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News