ಮಂಗಳೂರು: ಬ್ಯಾಂಕ್ ವಿಲೀನ ನಿರ್ಧಾರ ವಾಪಸ್ ಪಡೆಯಲು ಒಕ್ಕೊರಲ ಆಗ್ರಹ

Update: 2020-03-05 13:39 GMT

ಮಂಗಳೂರು, ಮಾ.5: ಕೇಂದ್ರ ಸರಕಾರವು ಕರಾವಳಿ ಭಾಗದ ಸಿಂಡಿಕೇಟ್ ಮತ್ತು ಕಾರ್ಪೊರೇಶನ್ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ನಿರ್ಧಾರವನ್ನು ವಾಪಸ್ ಪಡೆಯಲು ಸಮಾನ ಮನಸ್ಕ ಹೋರಾಟಗಾರರು, ಬ್ಯಾಂಕ್ ಅಧಿಕಾರಿಗಳು, ನ್ಯಾಯವಾದಿಗಳು ಒಕ್ಕೋರಲಿನಿಂದ ಆಗ್ರಹಿಸಿದ್ದಾರೆ.

ನಗರದ ಪುರಭವನ ಎದುರಿನ ಗಾಂಧಿ ಪ್ರತಿಮೆ ಬಳಿ ಗುರುವಾರ ಸಂಜೆ ನಡೆದ ಖಂಡನಾ ಸಭೆ ಉದ್ದೇಶಿಸಿ ಮಾತನಾಡಿದ ಪರಿಸರ ಹೋರಾಟಗಾರ, ನ್ಯಾಯವಾದಿ ದಿನೇಶ್ ಹೆಗಡೆ ಉಳೆಪ್ಪಾಡಿ, ಕರಾವಳಿಯ ಜೀವನಾಡಿಯಾದ ಕಾರ್ಪೊರೇಷನ್ ಮತ್ತು ಸಿಂಡಿಕೇಟ್ ಬ್ಯಾಂಕ್‌ಗಳನ್ನು ಇತರ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆ ಅಂತಿಮ ನಿರ್ಧಾರಕ್ಕೆ ಸಹಿ ಹಾಕಿದೆ. ಇದು ಕರಾವಳಿಯ ಮತ್ತು ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧದ ಈ ನಿರ್ಧಾರ ಆಗಿದ್ದು, ಕರಾವಳಿಯ ಜನತೆ ಖಂಡಿಸಬೇಕು ಎಂದು ಹೇಳಿದರು.

ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದಂತೆ ಆಘಾತಕಾರಿ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಬ್ಯಾಂಕ್ ವಿಲೀನ ವಿರೋಧಿಸಿ ಈ ಹಿಂದೆ ಸಾಕಷ್ಟು ಹೋರಾಟಗಳನ್ನು ನಡೆಸಲಾಗಿದೆ. ಕೇಂದ್ರ ಸಚಿವರ ಮೂಲಕ ಹಲವು ಮನವಿ ಸಲ್ಲಿಸಲಾಗಿದೆ. ಆದರೂ ಕೇಂದ್ರ ಸರಕಾರವು ಕಣ್ಣುಮುಚ್ಚಿ ಕುಳಿತಿದೆ ಎಂದರು.

ಬ್ಯಾಂಕ್ ವಿಲೀನವು ಕರಾವಳಿಯ ಆರ್ಥಿಕತೆಗೆ ಹಿನ್ನಡೆಯಾಗಲಿದೆ. ಯಾವುದೇ ಮನವಿ, ಹೋರಾಟಕ್ಕೆ ಕೇಂದ್ರ ಸರಕಾರವ ಮನ್ನಣೆ ನೀಡುತ್ತಿಲ್ಲ. ಮುಂದಿನ ಎಪ್ರಿಲ್ 1ರಿಂದ ವಿಲೀನ ಜಾರಿಗೆ ಬರಲಿದೆ. ಈ ಮೂಲಕ ಸರಕಾರವು ಉದ್ಧಟತನ ಪ್ರದರ್ಶಿಸುತ್ತಿದೆ. ಈ ಬ್ಯಾಂಕ್‌ಗಳಿಗೆ ಶೇರುದಾರರು, ನಿರ್ದೇಶಕರು ಇರುತ್ತಾರೆ. ಆದರೆ ಕಳೆದ ಆರು ವರ್ಷಗಳಿಂದ ನಿರ್ದೇಶಕರನ್ನು ನೇಮಕ ಮಾಡಿಲ್ಲ ಎಂದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಕಳೆದ ಬಾರಿ ವಿಜಯ ಬ್ಯಾಂಕ್ ವಿಲೀನವಾದಾಗಲೂ ಜಿಲ್ಲೆಯಲ್ಲಿ ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳು ಹೋರಾಟಕ್ಕೆ ಇಳಿದಿದ್ದವು. ಆದರೆ ಈ ಬಾರಿ ಎರಡು ಬ್ಯಾಂಕ್ ವಿಲೀನವಾಗುತ್ತಿದ್ದರೂ ಜಿಲ್ಲೆಯ ಜನತೆ ಸೊಲ್ಲೆತ್ತುತ್ತಿಲ್ಲ. ಕಳೆದ ಬಾರಿ ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲ್ ವಿಜಯ ಬ್ಯಾಂಕ್ ಉಳಿಸುವ ಬಗ್ಗೆ ಆಶ್ವಾಸನೆ ಕೊಟ್ಟಿದ್ದರು. ಅದು ಈಡೇರಲಿಲ್ಲ. ಇಲ್ಲಿನ ಜನಪ್ರತಿನಿಧಿಗಳು ದೆಹಲಿ ದೊರೆಗಳ ಅಡಿಯಾಳಾಗುತ್ತಿರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.

ದೆಹಲಿಯು ಪ್ರಜಾಪ್ರಭುತ್ವದ ಕೇಂದ್ರವಾಗಿ ಉಳಿದಿಲ್ಲ. ದೊರೆಗಳ ಕಾಲದ ಸಿಂಹಾಸನದಂತಾಗಿದೆ. ದೆಹಲಿಯ ದೊರೆಗಳಿಗೆ ಜಿಲ್ಲೆಯ ಜನಪ್ರತಿನಿಧಿಗಳು ನಿಷ್ಠೆಯಿಂದ ಉಳಿದುಕೊಂಡಿದ್ದಾರೆ. ವಿಜಯ ಬ್ಯಾಂಕ್ ಹೋದ ಬೆನ್ನಲ್ಲೇ ಮಂಗಳೂರು ವಿಮಾನ ನಿಲ್ದಾಣವೂ ಗುಜರಾತ್ ಮೂಲದ ಅದಾನಿಗೆ ಮಾರಾಟ ಮಾಡಲಾಗಿದೆ. ವಿಮಾನ ನಿಲ್ದಾಣಕ್ಕೆ ಕೋಟಿಚನ್ನಯ, ಅಬ್ಬಕ್ಕ ಹೆಸರು ಇಡುವ ಬದಲು ಅದಾನಿ ಹೆಸರೇ ಇಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಂಡಿಕೇಟ್ ಮತ್ತು ಕಾರ್ಪೊರೇಶನ್ ಬ್ಯಾಂಕ್‌ಗಳು ಕಣ್ಮರೆಯಾಗುತ್ತಿವೆ. ಬ್ಯಾಂಕ್ ಸಂಸ್ಥಾಪಕರ ಹೆಸರಲ್ಲಿ ಸರ್ಕಲ್‌ಗಳಿಗೆ ಹೆಸರಿಡುವುದು, ಕೇಂದ್ರ ಕಚೇರಿಯಲ್ಲಿ ಅವರ ಫೋಟೊ ಇಡುತ್ತೇವೆ ಎಂದು ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಇಂತಹ ಭಾವುಕ ಮಾತುಗಳಿಗೆ ಬಲಿ ಬಿದ್ದು ಬದುಕು ಕಳೆದುಕೊಳ್ಳುವಂತಾಗಿದೆ. ವಿದ್ಯಾವಂತ ಯುವಕರು ನಿರುದ್ಯೋಗದಿಂದ ಬೀದಿಪಾಲಾಗುತ್ತಿದ್ದಾರೆ. ವ್ಯಾಪಾರವಿಲ್ಲದೇ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕೇಂದ್ರ ಸರಕಾರವು ಎಲ್ಲವನ್ನೂ ಖಾಸಗೀಕರಣಕ್ಕೆ ಮುಂದಾಗಿುವುದು ಅಪಾಯಕಾರಿಯಾಗಿದೆ ಎಂದರು.

ಈ ಸಂದರ್ಭ ಕಾರ್ಪೊರೇಶನ್ ಬ್ಯಾಂಕ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಟಿ.ಆರ್.ಭಟ್, ಪರಿಸರಾಸಕ್ತ ಒಕ್ಕೂಟದ ಅಧ್ಯಕ್ಷ ದುರ್ಗಾಪ್ರಸಾದ್, ಮಾನವ ಹಕ್ಕುಗಳ ಒಕ್ಕೂಟದ ಬಾಲಕೃಷ್ಣ ರೈ, ನ್ಯಾಯವಾದಿ ನಿತಿನ್‌ಕುಮಾರ್ ಕುತ್ತಾರ್, ಸಮುದಾಯ ಸಾಂಸ್ಕೃತಿಕ ಸಂಘದ ವಾಸುದೇವ ಉಚ್ಚಿಲ್, ಎಸ್‌ಎಫ್‌ಐನ ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್, ರೆಹಮಾನ್‌ಖಾನ್, ಡಿವೈಎಫ್‌ಐನ ಜಿಲ್ಲಾ ಕಾರ್ಯದರ್ಶಿಸಂತೋಷ್ ಬಜಾಲ್, ಸಾಮಾಜಿಕ ಹೋರಾಟಗಾರ ಜೆರಾಲ್ಡ್ ಟವರ್ಸ್, ಕಾರ್ಪೊರೇಶನ್ ಬ್ಯಾಂಕ್ ಯುನಿಯನ್‌ನ ಅಧ್ಯಕ್ಷ ಸುಧೀಂದ್ರ, ಕಾರ್ಪೊರೇಶನ್ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ವಿನ್ಸೆಂಟ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News