×
Ad

ಮಂಗಳೂರಿನಲ್ಲಿ ವಿಶೇಷ ಪೋಕ್ಸೊ ನ್ಯಾಯಾಲಯ ಉದ್ಘಾಟನೆ

Update: 2020-03-05 19:10 IST

ಮಂಗಳೂರು, ಮಾ.5: ಸುಪ್ರೀಂ ಕೋರ್ಟ್ ನಿರ್ದೇಶನದಂತೆ 100ಕ್ಕಿಂತ ಅಧಿಕ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಲೇವಾರಿಗೆ ಬಾಕಿಯಿರುವ ಮಂಗಳೂರು ಸಹಿತ ರಾಜ್ಯದ 17 ಜಿಲ್ಲೆಗಳಲ್ಲಿ ಗುರುವಾರ ವಿಶೇಷ ಪೋಕ್ಸೋ ನ್ಯಾಯಾಲಯ ಆರಂಭಗೊಂಡಿತು.

ನಗರದ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದ ಆರನೇ ಮಹಡಿಯಲ್ಲಿ ‘ಪೋಕ್ಸೊ ವಿಶೇಷ ನ್ಯಾಯಾಲಯ’ವನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಉದ್ಘಾಟಿಸಿದರು.

* 185 ಪ್ರಕರಣ ಬಾಕಿ

ಜಿಲ್ಲೆಯಲ್ಲಿ 2017ರಿಂದ 185 ಪೋಕ್ಸೊ ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. ಪೋಕ್ಸೊ ನ್ಯಾಯಾಲಾಯದ ನ್ಯಾಯಾಧೀಶೆಯಾಗಿ ಅಧಿಕಾರ ಸ್ವೀಕರಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಈ ಹಿಂದೆ ಕುಟುಂಬ ನ್ಯಾಯಾಲಯದ ಒಂದನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

* ಪ್ಲೇ ಸ್ಕೂಲ್ ವಾತಾವರಣ

ಪೋಕ್ಸೊ ನ್ಯಾಯಾಲಯವು ಇತರ ನ್ಯಾಯಾಲಯಕ್ಕಿಂತ ಪೂರ್ಣ ಭಿನ್ನ ಪರಿಸರವನ್ನು ಹೊಂದಿರಲಿದೆ. ಅಂದರೆ ಈ ನ್ಯಾಯಾಲಯವು ಮಕ್ಕಳ ಆಟಿಕೆ, ಜಾರು ಬಂಡಿ, ಗೋಡೆಗಳಲ್ಲಿ ಮಕ್ಕಳನ್ನು ಸೆಳೆಯುವಂತಹ ಬಹುವರ್ಣದ ಚಿತ್ರಗಳಿರುವ ಕೊಠಡಿಯಿಂದ ಕೂಡಿದೆ. ಇದು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳನ್ನು ವಿಚಾರಣೆಗೆ ಮೊದಲು ಮಾನಸಿಕವಾಗಿ ಸಿದ್ಧಪಡಿಸುವ ಪ್ಲೇ ಸ್ಕೂಲ್ ಮಾದರಿಯ ಕೊಠಡಿಯಾಗಿದೆ. ಪೊಲೀಸರು ಎಂದಿನಂತೆ ಸಮವಸ್ತ್ರದಲ್ಲಿರುವುದಿಲ್ಲ. ಅಂದರೆ ಮಕ್ಕಳು ಭಯ ಮುಕ್ತವಾಗಿ ತನ್ನ ಅನುಭವ-ಅಭಿಪ್ರಾಯ ಹಂಚಿಕೊಳ್ಳುವ ವಾತಾವರಣಕ್ಕೆ ಇಲ್ಲಿ ಆದ್ಯತೆ ನೀಡಲಾಗಿದೆ.

ಈ ಸಂದರ್ಭ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗಡೆ, ಉಪಾಧ್ಯಕ್ಷ ರಾಘವೇಂದ್ರ ಎಚ್.ಆರ್, ಮಾಜಿ ಉಪಾಧ್ಯಕ್ಷೆ ಪುಷ್ಪಲತಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News