×
Ad

ಹೆಬ್ರಿ: ಶುಕ್ರವಾರದಿಂದ 10ನೇ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ

Update: 2020-03-05 19:17 IST

 ಹೆಬ್ರಿ, ಮಾ.5: ತಾಲೂಕಿನ ಮುದ್ರಾಡಿಯ ನಾಟ್ಕದೂರಿನಲ್ಲಿ ನಿರ್ಮಾಣ ಗೊಂಡಿರುವ ಸುಸಜ್ಜಿತ ಆರೂರು ಕೃಷ್ಣಮೂರ್ತಿರಾವ್ ಬಯಲು ರಂಗ ಮಂದಿರ ನಾಳೆ ಲೋಕಾರ್ಪಣೆಗೊಳ್ಳಲಿದೆ. ಇದರೊಂದಿಗೆ ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ ಆಯೋಜಿಸುತ್ತಿರುವ 10ನೇ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವಕ್ಕೆ ನಾಳೆ ಸಂಜೆ ಚಾಲನೆ ನೀಡಲಾಗುವುದು ಎಂದು ಸಂಘಟನೆಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಜಾಲ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಸಂಜೆ 6:30ಕ್ಕೆ ಬಯಲು ರಂಗ ಮಂದಿರವನ್ನು ಮಂಗಳೂರಿನ ಉದ್ಯಮಿ ಆರೂರು ಲಕ್ಷ್ಮಿರಾವ್ ಅವರು ಉದ್ಘಾಟಿಸಲಿದ್ದಾರೆ. ನಾಟಕೋತ್ಸವ ಮಾ.6ರಿಂದ 12ರವರೆಗೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಮೂಡಬಿದ್ರೆಯ ಡಾ.ಮೋಹನ ಆಳ್ವ ಅವರಿಗೆ ‘ಮುದ್ರಾಡಿ ನಾಟ್ಕ ಸಂಮಾನ-2020’ ನೀಡಿ ಗೌರವಿಸಲಾಗುವುದು ಎಂದರು.

 ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಭೀಮಸೇನ ಆರ್., ಕಾರ್ಕಳ ಬಿಲ್ಲವ ಸಮಾಜ ಸೇವಾಸಂಘದ ಅಧ್ಯಕ್ಷ ಡಿ.ಆರ್.ರಾಜು ಪಾಲ್ಗೊಳ್ಳಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಅಕಾಶ್‌ರಾಜ್ ಜೈನ್‌ರನ್ನು ಅಭಿನಂದಿಸಲಾಗುವುದು ಎಂದರು.

ಬಳಿಕ ರಾಷ್ಟ್ರೀಯ ರಂಗೋತ್ಸವದ ಮೊದಲ ನಾಟಕವಾಗಿ ಮಂಗಳೂರು ಜರ್ನಿ ಥೇಟರ್ ಗ್ರೂಪ್ ಪ್ರಸ್ತುತ ಪಡಿಸುವ ಪ್ರೊ.ಅಮೃತ ಸೋಮೇಶ್ವರ ರಚನೆಯ ತುಳು ನಾಟಕ ‘ಗೋಂದೊಳು’ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ ಎಂದರು. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪ್ರಯೋಗರಂಗದಿಂದ ಡಾ. ಚಂದ್ರಶೇಖರ ಕಂಬಾರರ ಹೊಸ ನಾಟಕ ‘ಮಹಮೂದ್ ಗಾವಾನ್’, ಬಿ.ಸುರೇಶ್ ನಿರ್ದೇಶನದಲ್ಲಿ, ಮಾ.8ರಂದು ಕುವೆಂಪು ಅವರ ಮೂಲ ಕೃತಿಯ ತುಳು ರೂಪ ‘ಪತ್ತೆತರತಾಯನ ಕನತ ಕತೆ’ ಮೈಮ್ ರಮೇಶ್ ನಿರ್ದೇಶನದಲ್ಲಿ ನಮ ತುಳುವೆರ್ ಸಂಘಟನೆಯಿಂದ ಪ್ರದರ್ಶನಗೊಳ್ಳಲಿದೆ.

ಮಾ.9ರಂದು ಭೊಪಾಲ್‌ನ ಏಕ್‌ರಂಗ್ ಸೋಷಿಯಲ್ ಕಲ್ಚರಲ್ ಸೊಸೈಟಿ ಹಿಂದಿ ನಾಟಕವನ್ನು, 10ರಂದು ಮುಂಬಯಿಯ ಅಭಿನಯ್ ಕಲ್ಯಾಣ್ ಮರಾಠಿ ನಾಟಕವನ್ನು, 11ರಂದು ಗಣೇಶ್ ಬ್ರಹ್ಮಾವರ ಮತ್ತು ಬಳಗ ‘ಶಿವಭಕ್ತ ವೀರಮಣಿ’ ಯಕ್ಷಗಾನವನ್ನು ಪ್ರದರ್ಶಿಸಲಿವೆ. ಅಲ್ಲದೇ ಪ್ರತಿದಿನ ಉಚಿತ ವೈದ್ಯಕೀಯ ತಪಾಸಣಾ ಸಿಬಿರ, ರಂಗಭೂಮಿ ಕುರಿತು ವಿಚಾರಸಂಕಿರಣ ಹಾಗೂ ಪುಸ್ತಕಗಳ ಲೋಕಾರ್ಪಣೆಯೊಂದಿಗೆ ರಂಗಕರ್ಮಿಗಳಿಗೆ ಸನ್ಮಾನವೂ ನಡೆಯಲಿದೆ ಎಂದು ಅವರು ತಿಳಿಸಿದರು.

ಬಯಲುರಂಗ ಮಂದಿರ:  ಮಂಗಳೂರಿನ ಉದ್ಯಮಿ ಡಾ.ಆರೂರು ಪ್ರಸಾದ್ ರಾವ್ ತನ್ನ ತಂದೆ ಆರೂರು ಕೃಷ್ಣಮೂರ್ತಿ ರಾವ್ ಹೆಸರಿನಲ್ಲಿ ಈ ಬಯಲು ರಂಗಮಂದಿರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಅಲ್ಲದೇ ಕಲಾವಿದೆ ಡಾ.ಬಿ.ಜಯಶ್ರೀ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಜಿಪಂ ಸದಸ್ಯರಾಗಿದ್ದ ಮುದ್ರಾಡಿ ಮಂಜುನಾಥ ಪೂಜಾರಿ, ಸಾಹಿತಿ ಡಾ.ಡಿ.ಕೆ.ಚೌಟ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಕೆ.ಪ್ರತಾಪಚಂದ್ರ ಶೆಟ್ಟಿ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ರಂಗಮಂದಿರ ಕಟ್ಟುವ ನಮ್ಮ ಕನಸು ನನಸಾಗಲು ನೆರವು ನೀಡಿದ್ದಾರೆ ಎಂದು ನಮತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.

ಪ್ರಕೃತಿಯ ನಡುವೆ 850 ಮಂದಿ ಕುಳಿತು ನಾಟಕ ನೋಡುವ ಗ್ಯಾಲರಿ, ಅತಿಥಿಗಳಿಗೆ ತಂಗಲು 4 ಸುಸಜ್ಜಿತ ರೂಮುಗಳು, 100 ಜನ ಕಲಾವಿದರು ಉಳಿಯುವಂತೆ ಸಕಲ ವ್ಯವಸ್ಥೆಯ ಕೊಠಡಿಗಳು, ಕುಡಿಯುವ ನೀರು, ವಿದ್ಯುತ್, ಜನರೇಟರ್, ರಂಗಭೂಮಿಯ ಅಗತ್ಯದ ಸಕಲ ಪರಿಕರಗಳನ್ನು ಇದು ಹೊಂದಿದೆ ಎಂದು ಅವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಾಸಂಘಟನೆಯ ಸಂಸ್ಥಾಪಕ ಧರ್ಮಯೋಗಿ ಮೋಹನ್, ಸುಧೀಂದ್ರ ಮೋಹನ್ ಹಾಗೂ ಉಮೇಶ್ ಕಲ್ಮಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News