ರಾಜ್ಯ ಬಜೆಟ್‌ 2020: ಉಡುಪಿ ಜನಪ್ರತಿನಿಧಿಗಳ ಪ್ರತಿಕ್ರಿಯೆಗಳು

Update: 2020-03-05 14:53 GMT
ಫೋಟೊ: PTI

ಎಲ್ಲಾ ವರ್ಗಗಳಿಗೂ ಸಮಪಾಲು

ಮುಖ್ಯಮಂತ್ರಿಗಳು ಇಂದು ಮಂಡಿಸಿದ ಬಜೆಟ್ ಅನೇಕ ವರ್ಷಗಳ ಬಳಿಕ ಯಾವ ವರ್ಗಕ್ಕೂ ಅಸಮಾಧಾನವಾಗ ಬಜೆಟ್ ಆಗಿದೆ. ಕೇವಲ ಒಂದು ವರ್ಗವನನು ಓಲೈಸಲು ಮಂಡಿಸಿದ ಬಜೆಟ್ ಆಗದೇ, ‘ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು’ ತತ್ವ ಪಾಲನೆಯಾಗಿದೆ. ಅತ್ಯಂತ ಕಡೆಗಣನೆಗೆ ಕಾರಣವಾಗಿದ್ದ ಕರಾವಳಿ ಜಿಲ್ಲೆಗಳಿಗೆ ಈ ಬಾರಿಯ ಬಜೆಟ್ ಸಂತಸ ನೀಡಿದೆ.ವಿಶೇಷವಾಗಿ ಮೀನುಗಾರರ ಅನೇಕ ವರ್ಷಗಳ ಬೇಡಿಕೆಗೆ ಮನ್ನಣೆ ದೊರಕಿದೆ.

- ಕೆ.ರಘುಪತಿ ಭಟ್, ಶಾಸಕರು ಉಡುಪಿ

********************

ಸ್ಪಷ್ಟತೆ ಇಲ್ಲದ ಬಜೆಟ್

ಯೋಜನೆ ಅನುಷ್ಠಾನಗಳಿಗಾಗಿ ವಿಂಗಡಿಸಿದ ಅನುದಾನದ ಬಗ್ಗೆ ಸ್ಪಷ್ಟತೆಯಿಲ್ಲ. ಯಾವುದೇ ಹೊಸ ಯೋಜನೆಗಳಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ. ಕೃಷಿಗೆ ಹೆಚ್ಚಿನ ಮಹತ್ವ ನೀಡಿಲ್ಲ. ಕೃಷಿ ಉತ್ಪನ್ನ ದ್ವಿಗುಣಗೊಳ್ಳಲು ಯಾವುದೇ ಯೋಜನೆ ರೂಪಿಸಿಲ್ಲ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಜೀವನ ಚೈತ್ರಯಾತ್ರೆ ಯೋಜನೆ ಹಮ್ಮಿ ಕೊಂಡಿರುವುದು ಬಡವರಿಗೆ ಅನುಕೂಲವಾದರೂ ವಯಸ್ಸನ್ನು ನಿಗದಿ ಪಡಿಸಿರುವುದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

- ಅಶೋಕ್ ಕುಮಾರ್ ಕೊಡವೂರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

**************

ಕಟೀಲ್‌ಗೆ ಸಡ್ಡುಹೊಡೆದ ಮುಖ್ಯಮಂತ್ರಿ

ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಂಡಿಸಿದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕ. ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಸಿಎಂ ಬಜೆಟ್ ಭಾಷಣದಲ್ಲೇ ಒಪ್ಪಿಕೊಂಡಿದ್ದಾರೆ. ಬಜೆಟ್ ಮೂಲಕ ಸಿಎಂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಡ್ಡುಹೊಡೆದಿದ್ದಾರೆ. ಎತ್ತಿನಹೊಳೆ ಯೋಜನೆಗೆ ನಳಿನ್ ಕುಮಾರ್ ಕಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ದ.ಕ.ಜಿಲ್ಲೆಯಲ್ಲಿ ಅವರ ನೇತೃತ್ವದಲ್ಲೇ ಹೋರಾಟ ನಡೆದಿತ್ತು. ಇದೀಗ ರಾಜ್ಯಾಧ್ಯಕ್ಷರಿಗೆ ನೇರ ಸಡ್ಡು ಹೊಡೆದ ಮುಖ್ಯಮಂತ್ರಿಗಳು ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ. ಕೊರೋನ ತಡೆಗಟ್ಟುವ ಯಾವುದೇ ಮುನ್ನೆಚ್ಚರಿಕಾ ಕ್ರಮ ಬಜೆಟ್‌ನಲ್ಲಿಲ್ಲ. ಒಟ್ಟಾರೆ ಆರ್ಥಿಕ ಚೇತರಿಕೆಗೆ ಇಂಬು ಕೊಡದ ಬಜೆಟ್ ಇದಾಗಿದೆ.

- ವಿನಯಕುಮಾರ್ ಸೊರಕೆ, ಮಾಜಿ ಸಚಿವ, ಕಾಪು.

******************

ಕೃಷಿಕರು, ಮೀನುಗಾರರಿಗೆ ಹರ್ಷ

ಸಾವಯವ ಕೃಷಿ, ಅಡಿಕೆ ಕೃಷಿಗೆ ಪ್ರೋತ್ಸಾಹ, ಹನಿ ನೀರಾವರಿ, ಕಿಂಡಿ ಅಣೆಕಟ್ಟು ಮೂಲಕ ಜಲ ಸಂರಕ್ಷಣೆಗೆ ಒತ್ತು, ಮೀನುಗಾರ ಮಹಿಳೆಯರಿಗೆ, ಬಂದರುಗಳ ಅಭಿವೃದ್ಧಿಗೆ, ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆರ್ಥಿಕ ನೆರವು, ಹಳ್ಳಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ, ರೈತರ ಸಾಮರ್ಥ್ಯ ವೃದ್ಧಿಗೆ ಹಾಗೂ ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಶೀತಲೀಕರಣ ಘಟಕಗಳಿಗೆ ಅನುದಾನ, ಕಿಸಾನ್ ಸಮ್ಮಾನ ಮುಂದುವರಿಕೆ ಮತ್ತು ಹೊಸ ಕೃಷಿ ನೀತಿ ರೂಪಿಸುವುದು ಮೊದಲಾದ ಯೋಜನೆಗಳನ್ನು ಘೋಷಿಸುವ ಮೂಲಕ ಕೃಷಿಕರಲ್ಲಿ, ಮೀನುಗಾರರಲ್ಲಿ ಬಜೆಟ್ ಸಂತಸವನ್ನು ತಂದಿದೆ.

 - ಸತ್ಯನಾರಾಯಣ ಉಡುಪ ಜಪ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಭಾಕಿಸಂ ಉಡುಪಿ.

****************

ನಿರಾಶಾದಾಯಕ ಬಜೆಟ್

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಹಕ್ಕಿನ ಅನುದಾನದ ಪಾಲನ್ನು ತರಲು ವಿಫಲರಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಂದ ಯಾವುದೇ ಹೊಸತನವಿಲ್ಲದ ನಿರಾಶಾದಾಯಕ ಬಜೆಟ್ ಮಂಡನೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಎದ್ದು ನಿಲ್ಲಿಸುವ ಪ್ರಯತ್ನದ ಬದಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಮೂಲಕ ಮತ್ತೆ ಬಡವರ, ಮಧ್ಯಮ ವರ್ಗದವರ ಮೇಲೆ ಹೊರೆ ಬೀಳುವಂತೆ ಮಾಡಿದ್ದಾರೆ.

- ಯೋಗೀಶ್ ವಿ.ಶೆಟ್ಟಿ, ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ

****************

ಹೊಸ ಯೋಜನೆಗಳಿಲ್ಲದ ಬಜೆಟ್

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಜನರ ಜೇಬಿಗೆ ಕತ್ತರಿ. ಕೃಷಿಗೆ ಹೆಚ್ಚಿನ ಮಹತ್ವ ನೀಡಿಲ್ಲ. ಸಂಪನ್ಮೂಲದ ಕ್ರೋಡೀಕರಣ ಬಗ್ಗೆ ಸ್ವಷ್ಟತೆಯಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್‌ಟಿ ಹಾಗೂ ತೆರಿಗೆಪಾಲನ್ನು ಪಡೆಯುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ. ಪ್ರತಿಮೆಗಳ ನಿರ್ಮಾಣದ ಮೂಲಕ ಯಾರ ಬಡತನವೂ ನೀಗಲ್ಲ. ಒಟ್ಟಾರೆ ದಿಕ್ಕು ದಿಸೆ ಇಲ್ಲದ ಬಜೆಟ್.

- ಭಾಸ್ಕರ ರಾವ್ ಕಿದಿಯೂರು, ಜಿಲ್ಲಾ ವಕ್ತಾರರು, ಉಡುಪಿ ಜಿಲ್ಲಾ ಕಾಂಗ್ರೆಸ್

*******************

ಜನಪರ ಅಭಿವೃದ್ಧಿ ಬಜೆಟ್

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಕರ್ನಾಟಕ ರಾಜ್ಯದ 2020-21ನೇ ಸಾಲಿನ ಬಜೆಟ್ ಜನಸಾಮಾನ್ಯರ ಅಭಿವೃದ್ಧಿಗೆ ಒತ್ತು ನೀಡುವ ಜನಪರ ಬಜೆಟ್. ಆದಾಯ ಹೆಚ್ಚಿಸಲು ಅಬಕಾರಿ, ಪೆಟ್ರೋಲ್, ಡೀಸೆಲ್ ಸುಂಕ ಏರಿಸಲಾಗಿದ್ದರೂ, ಜನಸಾಮಾನ್ಯರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ರೈತರ ಏಳಿಗೆಗೆ ಪ್ರಾಮುಖ್ಯತೆ ನೀಡಿ, ನೀರಾವರಿ ಹಾಗೂ ತೋಟಗಾರಿಕೆಗೆ ಮಹತ್ವದ ಯೋಜನೆಗಳನ್ನು ಮಂಡಿಸಲಾಗಿದೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಹೆಜಮಾಡಿಯಲ್ಲಿ ಬಂದರು ನಿರ್ಮಾಣ, ಮುಲ್ಕಿಯಲ್ಲಿ ಮೀನು ಉತ್ಪಾದನಾ ಕೇಂದ್ರ ಸ್ಥಾಪನೆಯಾಗಲಿದೆ. ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡುವ ಯೋಜನೆಯಿದೆ. ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತಂದಲ್ಲಿ ರಾಜ್ಯದ ಬೆಳವಣಿಗೆಯಾಗಿ ಈ ಬಜೆಟ್ ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡುತ್ತದೆ.

- ಸಿಎ.ನರಸಿಂಹ ನಾಯಕ್, ನಿಕಟಪೂರ್ವ ಅಧ್ಯಕ್ಷರು, ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ

*******************

ಕೃಷಿಗೆ ಆಶಾದಾಯಕ ಬಜೆಟ್

ಬಜೆಟ್ ಆಶಾದಾಯಕವಾಗಿದೆ. ಪ್ರತಿ ಬಜೆಟ್‌ನಲ್ಲಿ ಕೃಷಿ ಒತ್ತು ನೀಡಿದಂತೆ ಈ ಬಾರಿಯು ಸಹ ಹೆಚ್ಚಿನ ಒತ್ತು ನೀಡಲಾಗಿದೆ. ಸರಕಾರದ ಘೋಷಣೆಗಳು ಕೇವಲ ಬಜೆಟ್‌ನ ಘೋಷಣೆಗೆ ಸೀಮಿತವಾಗದೆ ಕಾರ್ಯ ರೂಪಕ್ಕೆ ಬರಬೇಕು. ಕೃಷಿ ಸಮ್ಮಾನ ಮೊತ್ತವನ್ನು 4000 ರೂ.ನಿಂದ 10,000 ರೂ.ಗೆ ಏರಿಕೆ ಮಾಡಿರುವುದು ಖುಷಿ ತಂದಿದೆ. ಇದರಿಂದ ಸಣ್ಣ, ಅತಿ ಸಣ್ಣ ರೈತರಿಗೆ ಸಹಾಯವಾಗಲಿದೆ. ಅಡಿಕೆ ಬೆಳೆಗಾರರ ಶೇ. 5ರಷ್ಟು ಬಡ್ಡಿಯನ್ನ ಸರಕಾರ ಭರಿಸುವುದಾಗಿ ಘೋಷಣೆ ಮಾಡಿದೆ. ಕೃಷಿ ಸುಸ್ತಿ ಸಾಲಮನ್ನಾ ಮಾಡುವ ಬದಲು ಬೇರೆ ಯೋಜನೆ ಜಾರಿಗೆ ತರಬಹುದಿತ್ತು.

-ಕುದಿ ಶ್ರೀನಿವಾಸ ಭಟ್, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕೃಷಿಕ ಸಂಘ ಉಡುಪಿ

**********************

ಅಭಿವೃದ್ಧಿಗೆ ಪೂರಕ ಬಜೆಟ್

ಬಿ.ಎಸ್.ಯಡಿಯೂರಪ್ಪಇಂದು ಮಂಡಿಸಿದ 2020-21ನೇ ಸಾಲಿನ ಅಯವ್ಯಯ ರಾಜ್ಯದ ಅಭಿವೃದ್ಧಿಗಾಗಿ ಮತ್ತು ರಾಜ್ಯವನ್ನು ಸಮೃದ್ಧಿಯತ್ತ ಕೊಂಡೊಯ್ಯುವ, ಸಮಾಜದ ಎಲ್ಲಾ ವರ್ಗದ, ಹಿಂದುಳಿದ ವರ್ಗ ಮತ್ತು ಸಮಾಜದ ಕೆಳವರ್ಗದ ಜನರನ್ನು ಗುರುತಿಸಿ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಪೂರಕವಾದ ಬಜೆಟ್. 

-ಮಟ್ಟಾರು ರತ್ನಾಕರ ಹೆಗ್ಡೆ, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು.

*****************

ದೂರದೃಷ್ಟಿ ಹೊಂದಿದ ಬಜೆಟ್

 ಕೃಷಿಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಬಗ್ಗೆ ‘ಮನೆ ಮನೆಗೆ ಗಂಗೆ’ ಹೊಸ ಯೋಜನೆ, ಪ್ರವಾಸೋದ್ಯಮಕ್ಕೆ 500ಕೋಟಿ, ಸಾವಯವ ಕೃಷಿಗೆ 200 ಕೋಟಿ ಮೀಸಲಿ ಡಲಾಗಿದೆ. ಉಡುಪಿ ಜಿಲ್ಲೆಯ ಹಂಗಾರಕಟ್ಟೆ, ಮಂಗಳೂರಿನ ಕುಳಾಯಿನಲ್ಲಿ ಬಂದರು ನಿರ್ಮಾಣ ಕರಾವಳಿ ಅಭಿವೃದ್ಧಿಗೆ ಅನುಕೂಲ. ಕಾರ್ಕಳದಲ್ಲಿ ಜವಳಿ ಪಾರ್ಕ್ ನಿರ್ಮಾಣ ಯೋಜನೆಯಿಂದ ಜವಳಿ ಉದ್ಯಮಕ್ಕೆ ಪೋತ್ಸಾಹ.

- ಉದಯಕುಮಾರ್ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News