ಬಿಜೆಪಿಗೆ ಏಳು ಶಾಸಕರನ್ನು ನೀಡಿದ ದ.ಕ. ಜಿಲ್ಲೆಗೆ ಬಜೆಟ್ ನಲ್ಲಿ ನ್ಯಾಯ ದೊರಕಿಲ್ಲ: ರಮಾನಾಥ ರೈ

Update: 2020-03-05 15:37 GMT

ಬಂಟ್ವಾಳ, ಮಾ.5: ಬಿಜೆಪಿಗೆ ಏಳು ಶಾಸಕರನ್ನು ನೀಡಿದ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಇರುವ ದಕ್ಷಿಣ ಕನ್ನಡ ಜಿಲ್ಲೆಗೆ ಈ ಬಾರಿಯ ಬಜೆಟ್‌ನಲ್ಲಿ ನ್ಯಾಯ ದೊರಕಿಲ್ಲ. ಯಾವ ವಿಚಾರದಲ್ಲೂ ಜಿಲ್ಲೆಗೆ ಬಜೆಟ್‌ನಲ್ಲಿ ಪ್ರಾತಿನಿಧ್ಯವೇ ದೊರೆತಿಲ್ಲ. ಬಿಜೆಪಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ್ದ ಜನರ ನಿರೀಕ್ಷೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿದ ಬಜೆಟ್ ಹುಸಿಗೊಳಿಸಿದೆ ಎಂದು ದ.ಕ.‌ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. 

ನಿರಂತರ ದರ ಕುಸಿತ ಮತ್ತು ಮಾರುಕಟ್ಟೆಯಲ್ಲಿನ ಪ್ರತಿಕೂಲ ಪರಿಸ್ಥಿತಿಯಿಂದ ನಷ್ಟದ ಸುಳಿಗೆ ಸಿಲುಕಿ, ಬಿಕ್ಕಟ್ಟಿನಲ್ಲಿರುವ ಜಿಲ್ಲೆಯ ರಬ್ಬರ್ ಬೆಳೆಗಾರರ ನೆರವಿಗೆ ಬಜೆಟ್‌ನಲ್ಲಿ ಪರಿಹಾರ ಕ್ರಮಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆ ಇತ್ತು. ಈ ಸರ್ಕಾರ ರಬ್ಬರ್ ಬೆಳೆಗಾರರನ್ನು ನಷ್ಟ ಮತ್ತು ಸಾಲದ ಸುಳಿಯಿಂದ ಪಾರು ಮಾಡಲು ರೈತರಿಗೆ ಆರ್ಥಿಕ ನೆರವು ಘೋಷಿಸಬಹುದು ಎಂಬ ಆಶಾಭಾವನೆ ಇತ್ತು. ಆದರೆ, ಮುಖ್ಯಮಂತ್ರಿ ರಬ್ಬರ್ ಬೆಳೆಗಾರರ ವಿಷಯವನ್ನೇ ಪ್ರಸ್ತಾಪಿಸದೇ ಜಿಲ್ಲೆಯ ಜನರಲ್ಲಿ ದಿಗ್ಭ್ರಮೆ ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಅಡಿಕೆ ಮತ್ತು ತೆಂಗು ಬೆಳೆಗಾರರಿಗೂ ವಿಶೇಷ ಯೋಜನೆಗಳನ್ನು ಪ್ರಕಟಿಸಬಹುದು ಎಂಬ ನಿರೀಕ್ಷೆ ಇತ್ತು. ಈ ರೈತರ ಬೇಡಿಕೆಗಳನ್ನು ಬಿಜೆಪಿ ಸರ್ಕಾರ ಕಿಂಚಿತ್ತೂ ಪರಿಗಣಿಸಿಲ್ಲ ಎಂಬುದು ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ. ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನ ಖರೀದಿಗೆ ನೆರವು ನೀಡುವ ತೋರಿಕೆಯ ಘೋಷಣೆಯೊಂದು ಬಜೆಟ್‌ನಲ್ಲಿ ಇದೆ. ಅದರ ಹೊರತಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವುದೇ ಯೋಜನೆಗಳನ್ನೂ ನೀಡಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿ ಘೋಷಣೆಗೆ ಸೀಮಿತ. ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಘೋಷಣೆ ಇದೆ, ಆದರೆ ಅನುದಾನವನ್ನೇ ಒದಗಿಸಿಲ್ಲ.

 ಕುಳಾಯಿ ಬಂದರು ನಿರ್ಮಾಣ ಹಿಂದಿನ ಸರ್ಕಾರದ ಯೋಜನೆ. ಅದನ್ನೇ ಪುನರುಚ್ಚರಿಸಿದ್ದಾರೆ‌ ಎಂದು ತಿಳಿಸಿದರು. 

ಉದ್ಯೋಗ ಸೃಷ್ಟಿಗೆ ಪೂರಕವಾದ ಯಾವುದೇ ಯೋಜನೆಗಳನ್ನು ಪ್ರಕಟಿಸಿಲ್ಲ. ಕೈಗಾರಿಕಾ ಅಭಿವೃದ್ಧಿಗೂ ಒತ್ತು ನೀಡಿಲ್ಲ.‌ ಆರ್ಥಿಕ ಕುಸಿತದಿಂದ ಸಂಕಷ್ಟದಲ್ಲಿರುವ ಜನರಿಗೆ  ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಹೊರೆ ಹೇರಿರುವುದು ಖಂಡನೀಯ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರ ನೆರವಿಗಾಗಿ ಜಾರಿಯಲ್ಲಿದ್ದ ಕೆಲವು ಕಾರ್ಯಕ್ರಮಗಳ ಅನುದಾನ ಕಡಿತಗೊಳಿಸಿರುವುದು ಸರಿಯಲ್ಲ. ಇದು ನಿರ್ದಿಷ್ಟ ಗುರಿ ಇಲ್ಲದ ಮತ್ತು ವಾಸ್ತವಿಕ ಸ್ಥಿತಿಗೆ ಪೂರಕವಲ್ಲದ ಒಂದು ನಿರಾಶಾದಾಯಕ ಬಜೆಟ್ ಎಂದು ರಮಾನಾಥ ರೈ ಪ್ರಕಟ‌ನೆಯಲ್ಲಿ ತಿಳಿಸಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News