ಮೂಡುಬಿದಿರೆ: ಸ್ಕೂಟರ್ ಗೆ ಲಾರಿ ಢಿಕ್ಕಿ; ವರ್ತಕ ಸಾವು

Update: 2020-03-05 15:49 GMT

ಮೂಡುಬಿದಿರೆ: ಕೋಳಿ ಸಾಗಾಟದ ಲಾರಿಯೊಂದು ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ಸ್ಕೂಟರಿಗೆ ಢಿಕ್ಕಿಯಾಗಿ ಹಿರಿಯ ವ್ಯಾಪಾರಿ ಸಾವಿಗೀಡಾದ ಘಟನೆ ಬುಧವಾರ ಸಂಜೆ ಸ್ವರಾಜ್ಯ ಮೈದಾನದ ಈಜುಕೊಳದ ಬಳಿ ನಡೆದಿದೆ. ಮೆ.ಜಿ.ಶ್ರೀಧರ ಶೆಣೈ ಆ್ಯಂಡ್ ಸನ್ಸ್‍ನ ಹಿರಿಯ ವ್ಯಾಪಾರಿ ಮಾಧವ ಶೆಣೈ (63) ಮೃತಪಟ್ಟವರು.

ಬುಧವಾರ ಸಂಜೆ ಅಂಗಡಿಯಿಂದ ಮನೆಗೆ ತೆರಳುತ್ತಿದ್ದ ಮಾಧವ ಶೆಣೈಯವರಿಗೆ ರಿಂಗ್ ರೋಡ್‍ನಲ್ಲಿ ಕೇರಳದಿಂದ ಕಾರ್ಕಳ ಕಡೆ ಹೋಗುವ ಕೋಳಿ ಸಾಗಾಟದ ಲಾರಿ ಸ್ಕೂಟರ್‍ಗೆ ಹಿಂಬದಿಯಿಂದ ಢಿಕ್ಕಿಯಾಗಿದೆ. ಗಂಭೀರವಾಗಿ  ಗಾಯಗೊಂಡ ಮಾಧವ ಶೆಣೈ ಅವರನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಬುಧವಾರ ರಾತ್ರಿ ಮೃತಪಟ್ಟಿರುತ್ತಾರೆ. ಲಾರಿ ಚಾಲಕ ವಿಜಯನ್ ಟಿ.ಎನ್ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮೃತರಿಗೆ ಪತ್ನಿ ಇದ್ದಾರೆ.

ವೇಗ ಕಡಿವಾಣಕ್ಕಿಲ್ಲವೇ ಕ್ರಮ?

ಮೂಡುಬಿದಿರೆ ಪೇಟೆಯಲ್ಲಿ ವಾಹನ ಒತ್ತಡ ನಿಯಂತ್ರಿಸಲು ರಿಂಗ್ ರೋಡ್ ವ್ಯವಸ್ಥೆ ಸ್ವಾಗತಾರ್ಹವಾಗಿದ್ದರೂ ಈ ವಿಶಾಲ ರಸ್ತೆಗೆ ಅಗತ್ಯವಿರುವಲ್ಲಿ ವೃತ್ತ, ವಿಭಾಜಕ, ವೇಗ ತಡೆಗೆ ಯಾವ ಕ್ರಮಗಳೂ ಆಗಿಲ್ಲ. ಎರಡೂ ಕಡೆ ಕಟ್ಟಡಗಳು ಬೆಳೆಯುತ್ತಿದ್ದು ವಾಹನಗಳ ಒತ್ತಡದ ಜತೆಗೆ ವೇಗಕ್ಕೂ ಮಿತಿ ಇಲ್ಲವಾಗಿದೆ. ಈ ಬಗ್ಗೆ ಸ್ಥಳೀಯ ಧನಂಜಯ ಮೂಡುಬಿದಿರೆ ಕಳೆದ ಬಾರಿ ಲೋಕಾಯುಕ್ತರ ಅದಾಲತ್‍ನಲ್ಲಿ ಲಿಖಿತ ದೂರು ನೀಡಿದ್ದರು. ಸಭೆಯಲ್ಲಿ ಪುರಸಭೆ, ಪೋಲೀಸ್ ಮತ್ತು ಲೋಕೋಪಯೋಗಿ ಇಲಾಖೆಗೆ ಸ್ಥಳದಲ್ಲೇ ಸೂಚನೆ ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡ ಹಾಗಿಲ್ಲ. ಹಾಗಾಗಿ ದುರಂತಗಳ ಪ್ರಕರಣಗಳಲ್ಲಿ  ಬೆಳಕಿಗೆ ಬಂದ ಘಟನೆಗಳಲ್ಲಿ ಈ ಪ್ರಕರಣವೂ ಒಂದಾಗಿದೆ. ಇನ್ನಾದರೂ ಸಂಬಂಧಪಟ್ಟವರು ತುರ್ತುಕ್ರಮಕ್ಕೆ ಮುಂದಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News