ಉಡುಪಿ: ನಗರಸಭೆ ಅನುಮತಿ ಪಡೆಯದೇ ರಸ್ತೆ ಅಗೆತ; ಖಾಸಗಿ ಕಂಪೆನಿಯ ಕೇಬಲ್ ಅಳವಡಿಕೆಗೆ ತಡೆ

Update: 2020-03-05 15:57 GMT

ಉಡುಪಿ, ಮಾ.5: ನಗರಸಭೆಯಿಂದ ಯಾವುದೇ ಅನುಮತಿ ಪಡೆಯದೇ ಖಾಸಗಿ ಕಂಪೆನಿಯೊಂದು ನಗರದ ವಿವಿದೆಡೆಗಳಲ್ಲಿ ನಡೆಸುತಿದ್ದ ರಸ್ತೆ ಅಗೆದು ಕೇಬಲ್ ಅಳವಡಿಸುವ ಕಾಮಗಾರಿಯನ್ನು ನಗರಸಭೆಯ ಅಧಿಕಾರಿಗಳು ನಿಲ್ಲಿಸಿದ ಘಟನೆ ಬುಧವಾರ ನಡೆದಿದೆ.

ಖಾಸಗಿ ಕಂಪೆನಿ ನಗರಸಭೆಯಿಂದ ಕೇಬಲ್ ಆಳವಡಿಕೆ ಕಾಮಗಾರಿಗಾಗಿ ಯಾವುದೇ ರೀತಿಯಾದ ಅನುಮತಿ ಇಲ್ಲದೆ ನಗರದ ವಿವಿಧ ಭಾಗದಲ್ಲಿ ಕೇಬಲ್‌ಗಳನ್ನು ಆಳವಡಿಸಲು ಮುಂದಾಗಿತ್ತು. ಮಿಶನ್ ಕಂಪೌಂಡ್ ಸರ್ಕಲ್ ನಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಮಾರ್ಗದಲ್ಲಿ ಈ ಕಾಮಗಾರಿ ನಡೆಯುತ್ತಿರುವ ಬಗ್ಗೆ ನಗರಸಭಾ ಸದಸ್ಯ ರಮೇಶ್ ಕಾಂಚನ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ನಗರಸಭೆಯ ಅಧಿಕಾರಿಗಳು, ಸ್ಥಳಕ್ಕೆ ತೆರಳಿ ಮೆಶಿನ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ‘ಕೆಲ ದಿನಗಳ ಹಿಂದೆ ಇದೇ ಕಂಪೆನಿ ಅನುಮತಿ ಕೋರಿ ನಗರಸಭೆಗೆ ಪತ್ರ ಬರೆದಿತ್ತು.ನಗರಸಭೆ ಈ ಸಂದರ್ಭ ನಿಯಮ ಹಾಗೂ ಷರತ್ತುಗಳ ಕುರಿತು ಅವರಿಗೆ ಮಾಹಿತಿ ನೀಡಿತ್ತು. ಆದರೆ ಕಂಪೆನಿ ನಿಯಮಾನುಸಾರ ಠೇವಣಿ ಹಾಗೂ ಅನುಮತಿ ಪತ್ರ ಪಡೆಯದೆ ಕೆಲಸ ಪ್ರಾರಂಭಿಸಿದ್ದಾರೆ. ಅವರು ಇದಕ್ಕೆ ನಗರಸಭೆಯಿಂದ ಯಾವುದೇ ಅನುಮತಿ ಯನ್ನೂ ಪಡೆದಿಲ್ಲ’ ಎಂದು ನಗರಸಭೆಯ ಎಇಇ ಮೋಹನ್‌ರಾಜ್ ತಿಳಿಸಿದ್ದಾರೆ.

ಯಾವುದೇ ಸಂಸ್ಥೆ, ಕಂಪೆನಿ ರಸ್ತೆಯನ್ನು ಅಗೆದು ಕಾಮಗಾರಿ ನಡೆಸುವಾಗ ಸ್ಥಳೀಯಾಡಳಿತದಿಂದ ಅನುಮತಿ ಪಡೆದಿರಬೇಕು. ಇದರೊಂದಿಗೆ ನಗರಸಭೆ ಅವರಿಂದ ಮುಚ್ಚಳಿಕೆ ಜತೆಗೆ ಠೇವಣಿಯನ್ನು ಪಡೆದುಕೊಳ್ಳಬೇಕು. ಕಾಮಗಾರಿ ಬಳಿಕ ರಸ್ತೆಯನ್ನು ಮೊದಲಿನ ಸ್ಥಿತಿಯಲ್ಲಿ ನಿರ್ಮಾಣ ಮಾಡುವಲ್ಲಿ ವಿಫಲ ವಾದರೆ ನಗರಸಭೆ, ಠೇವಣಿ ಹಣವನ್ನು ಬಳಸಿಕೊಂಡು ರಸ್ತೆ ದುರಸ್ತಿ ಮಾಡಬೇಕು. ಆದರೆ ಈ ಖಾಸಗಿ ಸಂಸ್ಥೆ ಯಾವುದೇ ಅನುಮತಿ ಇಲ್ಲದೆ ರಾಜಾರೋಷವಾಗಿ ರಸ್ತೆ ಅಗೆದು ಕೇಬಲ್ ಆಳವಡಿಸಲು ಮುಂದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News