ಉಪ್ಪಿನಂಗಡಿ: ದೆಹಲಿ ಹಿಂಸೆ ಖಂಡಿಸಿ ಎಸ್ಸೆಸ್ಸೆಫ್ ಪ್ರತಿಭಟನೆ

Update: 2020-03-05 17:49 GMT

ಉಪ್ಪಿನಂಗಡಿ, ಮಾ. 5: ಈ ದೇಶದ ವಾಯು, ಮಣ್ಣು, ಪರಿಸರವನ್ನು ಅನುಭವಿಸಿ ಅನ್ಯ ದೇಶಕ್ಕೆ ಜೈಕಾರ ಕೂಗುವ ದೇಶದ್ರೋಹಿಗಳನ್ನು ದೇಶದಿಂದ ಹೊರದಬ್ಬಲೆ ಬೇಕು. ಆದರೆ ದೇಶದ ಕರಾಳ ಕಾನೂನುಗಳನ್ನು ಪ್ರಶ್ನಿಸಿ ಮಾಡುವ ಪ್ರತಿಭಟನೆಯನ್ನು ದೇಶದ್ರೋಹದ ಪಟ್ಟಿಗೆ ಸೇರಿಸಬೇಡಿ. ಅದು ಪ್ರತಿಯೋರ್ವನ ಮಾನವ ಹಕ್ಕಾಗಿದೆ ಎಂದು ಜಿಲ್ಲಾ ಎಸ್ಸೆಸ್ಸೆಫ್ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ತಿಳಿಸಿದರು.

ದೆಹಲಿಯಲ್ಲಿ ನಡೆದ ಹಿಂಸಾತ್ಮಕ ಘಟನೆಯನ್ನು ಖಂಡಿಸಿ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್)ನ ಜಿಲ್ಲಾ ವ್ಯಾಪ್ತಿಯ 10 ಕೇಂದ್ರಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಯಂಗವಾಗಿ ಉಪ್ಪಿನಂಗಡಿ ಡಿವಿಷನ್ ವತಿಯಿಂದ ಇಲ್ಲಿನ ಪೃಥ್ವಿ ಶಾಪಿಂಗ್ ಮಾಲ್ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದೆಹಲಿ ಹತ್ಯಾಕಾಂಡ ಪೂರ್ವನಿರ್ಧರಿತವಾಗಿದ್ದು, ಜಾತ್ಯಾಧಾರಿತವಾಗಿ ಒಂದೇ ಧರ್ಮದವರನ್ನು ನೋಡಿ ಆಕ್ರಮಿಸುವುದನ್ನು ನಾವು ಸಹಿಸಲು ಸಾಧ್ಯವಿಲ್ಲ. ಈ ದೇಶ ಯಾರ ವೈಯಕ್ತಿಕ ಆಸ್ತಿಯೂ ಅಲ್ಲ. ಎಲ್ಲರಿಗೂ ಇಲ್ಲಿ ಸಮಾನ ಹಕ್ಕುಗಳಿವೆ ಎಂದರು.
ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿವಿಷನ್ ನಾಯಕರಾದ ಮಸೂದ್ ಸಅದಿ, ಇಸಾಕ್ ಮದನಿ, ರಫೀಕ್ ಅಹ್ಸನಿ, ಲತೀಫ್ ಕನ್ಯಾರಕೋಡಿ, ಕೆ.ಎಸ್. ಹಕೀಂ ಕಳಂಜಿಬೈಲು, ಇಬ್ರಾಹಿಂ ಸಅದಿ, ರಹ್ಮಾನ್ ಪದ್ಮುಂಜ, ಶಮೀರ್ ಸಅದಿ, ಹಾರಿಸ್ ಸಖಾಫಿ, ಜುನೈದ್ ತುರ್ಕಳಿಕೆ ಹಾಗೂ ವಿವಿಧ ಸೆಕ್ಟರ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನಾ ಭಾಷಣದ ಬಳಿಕ ದೆಹಲಿಯಲ್ಲಿ ನಡೆದ ಹಿಂಸಾತ್ಮಕ ಕೃತ್ಯವನ್ನು ಖಂಡಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಘೋಷಣೆ ಕೂಗಲಾಯಿತು. ನಂತರ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಉಪ್ಪಿನಂಗಡಿ ಠಾಣಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಡಿವಿಷನ್ ಜೊತೆ ಕಾರ್ಯದರ್ಶಿ ಎಂ.ಎಂ. ಮಹ್‍ರೂಫ್ ಆತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಯು.ಪಿ ಮುಸ್ತಫಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News