ದಿಲ್ಲಿ ಹಿಂಸಾಚಾರ: ಅರ್ಜಿಗಳ ವಿಚಾರಣೆಯನ್ನು ಮಾ.12ರವರೆಗೆ ಮುಂದೂಡಿದ ಹೈಕೋರ್ಟ್

Update: 2020-03-06 13:50 GMT

ಹೊಸದಿಲ್ಲಿ,ಮಾ.6: ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಮಾ.12ರವರೆಗೆ ಮುಂದೂಡಿದೆ.

ಅರ್ಜಿಗಳ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಎ.13ರವರೆಗೆ ದೀರ್ಘಾವಧಿಗೆ ಮುಂದೂಡಿದ್ದು, ಅಸಮರ್ಥನೀಯ ಎಂದು ಸರ್ವೋಚ್ಚ ನ್ಯಾಯಾಲಯವು ಮಾ.4ರಂದು ಹೊರಡಿಸಿದ್ದ ಆದೇಶದಂತೆ ಮು.ನ್ಯಾ.ಡಿ.ಎನ್. ಪಟೇಲ್ ಮತ್ತು ನ್ಯಾ.ಹರಿಶಂಕರ ಅವರ ವಿಭಾಗೀಯ ಪೀಠವು ಮಾ.22ರಂದು ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಇತರ ಅಹವಾಲುಗಳ ಜೊತೆಗೆ ಹಿಂಸಾಚಾರವನ್ನು ಪ್ರಚೋದಿಸಿದ್ದ ದ್ವೇಷ ಭಾಷಣಗಳನ್ನು ಮಾಡಿದ್ದಕ್ಕಾಗಿ ರಾಜಕೀಯ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆಯೂ ಈ ಅರ್ಜಿಗಳಲ್ಲಿ ಕೋರಲಾಗಿದೆ.

ದಂಗೆಗಳ ಸಂದರ್ಭ ದಿಲ್ಲಿ ಪೊಲೀಸರು ನಡೆಸಿರುವ ಹಿಂಸಾಚಾರಗಳ ಬಗ್ಗೆ ಸ್ವತಂತ್ರ ನ್ಯಾಯಾಂಗ ವಿಚಾರಣೆಯನ್ನು ನಡೆಸುವಂತೆಯೂ ಅರ್ಜಿದಾರರ ಪೈಕಿ ಹರ್ಷ ಮಂದರ್ ಕೋರಿದ್ದರೆ,ಹಿಂಸಾಚಾರದ ಸಂತ್ರಸ್ತರಿಗೆ ವೈದ್ಯಕೀಯ ಮತ್ತು ಮಾನವೀಯ ನೆರವು ಒದಗಿಸುವಂತೆ ರಾಹುಲ್ ರಾಯ್ ಕೋರಿದ್ದಾರೆ.

ಸಿಪಿಸಿಯ ಕಲಂ 41ಸಿ ಪಾಲಿಸುವಂತೆ ಪೊಲೀಸರಿಗೆ ನಿರ್ದೇಶ ಕೋರಿ ಸಿಪಿಎಂ ನಾಯಕಿ ಬೃಂದಾ ಕಾರಾಟ್ ಅವರು ಸಲ್ಲಿಸಿರುವ ತಾಜಾ ಅರ್ಜಿಯ ಕುರಿತು ನೋಟಿಸನ್ನೂ ಉಚ್ಚ ನ್ಯಾಯಾಲಯವು ಶುಕ್ರವಾರ ಹೊರಡಿಸಿತು. ಈ ಕಲಂ ಪೊಲೀಸರು ಬಂಧಿತ ವ್ಯಕ್ತಿಗಳ ಹೆಸರುಗಳನ್ನು ನಿಯಂತ್ರಣ ಕೊಠಡಿಗಳ ಹೊರಗೆ ಪ್ರದಶಿಸುವುದನ್ನು ಕಡ್ಡಾಯಗೊಳಿಸಿದೆ.

ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತ ವ್ಯಕ್ತಿಗಳು ಅಥವಾ ದಾಖಲಾಗಿರುವ ಎಫ್‌ಐಆರ್‌ಗಳ ಕುರಿತು ಪೊಲೀಸರು ಯಾವುದೇ ಸ್ಪಷ್ಟನೆಯನ್ನು ಒದಗಿಸಿಲ್ಲ ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ. ಪಾರದರ್ಶಕತೆಯ ಈ ಕೊರತೆಯು ನಾಪತ್ತೆಯಾಗಿರುವವರನ್ನು ಈಗಲೂ ಹುಡುಕಾಡುತ್ತಿರುವ ಅವರ ಕುಟುಂಬ ಸದಸ್ಯರನ್ನು ಹತಾಶರನ್ನಾಗಿಸಿದೆ. ತಮ್ಮವರು ಮೃತಪಟ್ಟಿದ್ದಾರೋ ಅಥವಾ ಈಗಲೂ ಬದುಕಿದ್ದಾರೋ ಅಥವಾ ಪೊಲೀಸರ ವಶದಲ್ಲಿದ್ದಾರೋ ಎನ್ನುವ ಬಗ್ಗೆ ಅವರಿಗೆ ಸ್ಪಷ್ಟತೆಯಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮುಂದಿನ ವಿಚಾರಣಾ ದಿನಾಂಕಕ್ಕೆ ಮುನ್ನ ಎಲ್ಲ ಅರ್ಜಿಗಳಿಗೆ ಉತ್ತರ ಸಲ್ಲಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶವನ್ನೂ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News