ನೂತನ ಸಿಐಸಿಯಾಗಿ ಜುಲ್ಕಾ ಪ್ರಮಾಣ ವಚನ ಸ್ವೀಕಾರ

Update: 2020-03-06 13:56 GMT
Photo: twitter.com/rashtrapatibhvn

ಹೊಸದಿಲ್ಲಿ,ಮಾ.6: ಕೇಂದ್ರವು ಮಾಜಿ ಐಎಎಸ್ ಅಧಿಕಾರಿ ಬಿಮಲ್ ಜುಲ್ಕಾ ಅವರನ್ನು ನೂತನ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ)ರಾಗಿ ಶುಕ್ರವಾರ ನೇಮಕಗೊಳಿಸಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜುಲ್ಕಾ ಅವರಿಗೆ ಪ್ರಮಾಣ ವಚನವನ್ನು ಬೋಧಿಸಿದರು.

  ನಿಕಟಪೂರ್ವ ಸಿಐಸಿ ಸುಧೀರ ಭಾರ್ಗವ ಅವರು ಜ.11ರಂದು ನಿವೃತ್ತರಾದ ಬಳಿಕ ಸುಮಾರು ಎರಡು ತಿಂಗಳ ಅವಧಿಗೆ ತೆರವಾಗಿಯೇ ಇದ್ದ ಈ ಹುದ್ದೆಗೆ ಜುಲ್ಕಾ ಅವರನ್ನು ನೇಮಕಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ಫೆಬ್ರವರಿಯಲ್ಲಿ ನಿರ್ಧರಿಸಿತ್ತು.

ಹಾಲಿ ರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿರುವ ಸಂಜಯ ಕೊಠಾರಿ ಅವರನ್ನು ಕೇಂದ್ರ ಮಾಹಿತಿ ಆಯೋಗದ ಮುಖ್ಯ ಜಾಗ್ರತ ಆಯುಕ್ತರನ್ನಾಗಿ ನೇಮಕಗೊಳಿಸಲೂ ಸಮಿತಿಯು ನಿರ್ಧರಿಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆಯಾದರೂ,ಅವರ ನೇಮಕದ ಬಗ್ಗೆ ಅಧಿಸೂಚನೆ ಇನ್ನಷ್ಟೇ ಹೊರಬೀಳಬೇಕಿದೆ.

ಕೊಠಾರಿ ನೇಮಕವನ್ನು ಆಕ್ಷೇಪಿಸಿರುವ ಕಾಂಗ್ರೆಸ್,ಇದು ರೀತಿರಿವಾಜುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಕೊಠಾರಿ ನೇಮಕದ ವಿರುದ್ಧ ಸಾಧ್ಯವಿರುವ ಕಾನೂನು ಕ್ರಮವನ್ನು ಕೈಗೊಳ್ಳಲು ಕಾಂಗ್ರೆಸ್ ಪರಿಶೀಲಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News