ಸದನ ಕಲಾಪಗಳ ವ್ಯತ್ಯಯದ ತನಿಖೆಗೆ ಲೋಕಸಭಾ ಸಮಿತಿ

Update: 2020-03-06 13:57 GMT

ಹೊಸದಿಲ್ಲಿ,ಮಾ.6: ಸದನದ ಕಲಾಪಗಳಿಗೆ ಮಾ.2ರಿಂದ 5ರವರೆಗಿನ ಅವಧಿಯಲ್ಲಿ ಉಂಟಾಗಿದ್ದ ವ್ಯತ್ಯಯದ ತನಿಖೆಗಾಗಿ ಲೋಕಸಭಾ ಸಮಿತಿಯೊಂದನ್ನು ರಚಿಸುವುದಾಗಿ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ತಿಳಿಸಿದರು. ಬಿರ್ಲಾ ನೇತೃತ್ವದ ಸಮಿತಿಯು ವಿವಿಧ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡಿರಲಿದೆ.

ಕಲಾಪಗಳಿಗೆ ವ್ಯತ್ಯಯವನ್ನುಂಟು ಮಾಡಿದ್ದಕ್ಕಾಗಿ ಸ್ಪೀಕರ್ ಗುರುವಾರ ಏಳು ಕಾಂಗ್ರೆಸ್ ಸಂಸದರನ್ನು ಮುಂಗಡಪತ್ರ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿದ್ದರು.

ತನ್ಮಧ್ಯೆ ಶುಕ್ರವಾರ ಪ್ರತಿಪಕ್ಷ ಸದಸ್ಯರು ದಿಲ್ಲಿ ಹಿಂಸಾಚಾರದ ವಿರುದ್ಧ ಘೋಷಣೆಗಳನ್ನು ಕೂಗುವುದರೊಂದಿಗೆ ಸತತ ಐದನೇ ದಿನವೂ ಲೋಕಸಭಾ ಕಲಾಪಗಳಿಗೆ ವ್ಯತ್ಯಯವುಂಟಾಗಿತ್ತು. ಕೋಲಾಹಲದಿಂದಾಗಿ ಕಲಾಪದ ಅವಧಿ ಅಪರಾಹ್ನದವರೆಗೆ ಕೇವಲ ಎರಡು ನಿಮಿಷಗಳಿಗೆ ಸೀಮಿತವಾಗಿತ್ತು.

 ಕಾಂಗ್ರೆಸ್ ನಾಯಕ ಆಧಿರ ರಂಜನ ಚೌಧುರಿ ಸೇರಿದಂತೆ ಹಲವಾರು ಪ್ರತಿಪಕ್ಷ ಸದಸ್ಯರು ಸದನದ ಅಂಗಳಕ್ಕೆ ಧಾವಿಸಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಿದರು. ಡಿಎಂಕೆ ಮತ್ತು ಐಯುಎಂಎಲ್ ಸದಸ್ಯರೂ ಪ್ರತಿಭಟನೆ ನಡೆಸಿದರು. ಕೆಲವು ಸಂಸದರು ಕಪ್ಪುಪಟ್ಟಿಗಳನ್ನು ಧರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News