×
Ad

ಭ್ರಷ್ಟಾಚಾರ ಆರೋಪಿ ಅಧಿಕಾರಿಗಳಿಗೆ ಪಾಸ್‌ಪೋರ್ಟ್ ಸಿಗುವುದಿಲ್ಲ: ಕೇಂದ್ರ ಸರಕಾರ ಸರಕಾರ

Update: 2020-03-06 19:31 IST

ಹೊಸದಿಲ್ಲಿ,ಮಾ.6: ಭ್ರಷ್ಟಾಚಾರ ಆರೋಪಗಳಲ್ಲಿ ಸೇವೆಯಿಂದ ಅಮಾನತುಗೊಂಡಿರುವ ಅಥವಾ ಭ್ರಷ್ಟಾಚಾರ ಆರೋಪಗಳ ಕುರಿತು ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿರುವ ಸರಕಾರಿ ಅಧಿಕಾರಿಗಳು ಪಾಸ್‌ಪೋರ್ಟ್ ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರವು ಅಧಿಕೃತ ಆದೇಶವೊಂದರಲ್ಲಿ ತಿಳಿಸಿದೆ.

ಸಿಬ್ಬಂದಿ ಸಚಿವಾಲಯವು ಕೇಂದ್ರ ಜಾಗ್ರತ ಆಯೋಗ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಮಾಲೋಚಿಸಿ ಹಾಲಿ ಮಾರ್ಗಸೂಚಿಗಳನ್ನು ಪುನರ್‌ಪರಿಶೀಲಿಸಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ.

ಸರಕಾರಿ ಅಧಿಕಾರಿಗಳಿಗೆ ಪಾಸ್‌ಪೋರ್ಟ್ ನೀಡುವಾಗ ಜಾಗ್ರತ ಇಲಾಖೆಯ ಅನುಮತಿಯ ಪರಿಶೀಲನೆ ಅಗತ್ಯವಾಗಿದೆ. ಅಧಿಕಾರಿಯು ಸೇವೆಯಿಂದ ಅಮಾನತುಗೊಂಡಿದ್ದರೆ ಅಥವಾ ಕ್ರಿಮಿನಲ್ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ಅಧಿಕಾರಿಯ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ದಾಖಲಿಸಿದ್ದರೆ ಜಾಗ್ರತ ಇಲಾಖೆಯ ಅನುಮತಿಯನ್ನು ತಡೆಹಿಡಿಯಬಹುದು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಥವಾ ಇತರ ಯಾವುದೇ ಕ್ರಿಮಿನಲ್ ವಿಷಯದಲ್ಲಿ ಸರಕಾರಿ ನೌಕರರ ವಿರುದ್ಧ ಕಾನೂನು ಕ್ರಮಕ್ಕೆ ಸಕ್ಷಮ ಪ್ರಾಧಿಕಾರವು ಮಂಜೂರಾತಿ ನೀಡಿದ್ದರೆ ಪಾಸ್‌ಪೋರ್ಟ್ ಪಡೆಯಲು ಜಾಗ್ರತ ಇಲಾಖೆಯ ಅನುಮತಿಯನ್ನು ನಿರಾಕರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಮ್ಮ ಅಧೀನದಲ್ಲಿಯ ಉದ್ಯೋಗಿಗಳು ಪಾಸ್‌ಪೋರ್ಟ್ ಪಡೆಯುವಾಗ ಪಾಸ್‌ಪೋರ್ಟ್ ಕಾಯ್ದೆ,1967ರ ಕಲಂ 6(2) ಅವರಿಗೆ ಅನ್ವಯವಾಗುತ್ತದೆಯೇ ಎನ್ನುವುದನ್ನು ಪರಿಶೀಲಿಸುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ.

 ಭಾರತದ ಹೊರಗೆ ಅರ್ಜಿದಾರನ ಉಪಸ್ಥಿತಿಯು ಯಾವುದೇ ವಿದೇಶಿ ರಾಷ್ಟ್ರದೊಂದಿಗೆ ಭಾರತದ ಸಂಬಂಧಕ್ಕೆ ಹಾನಿಯನ್ನುಂಟು ಮಾಡಬಹುದಾಗಿದ್ದರೆ ಅಥವಾ ಅರ್ಜಿದಾರನಿಗೆ ವೀಸಾ ನೀಡಿಕೆಯು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಕೇಂದ್ರ ಸರಕಾರವು ಭಾವಿಸಿದ್ದರೆ ಅಥವಾ ಇಂತಹುದೇ ಇತರ ಕಾರಣಗಳಿಂದ ಅರ್ಜಿದಾರನಿಗೆ ಪಾಸ್‌ಪೋರ್ಟ್ ನಿರಾಕರಿಸಲು ಈ ಕಲಂ ಅಧಿಕಾರಿಗಳಿಗೆ ಅವಕಾಶ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News