ಕೊರೋನಾ ವೈರಸ್ ಸೋಂಕಿನ ಭೀತಿ: 13 ಇರಾನಿಯರಿಗೆ ಅಮೃತಸರದಲ್ಲಿ ದಿಗ್ಬಂಧನ
ಚಂಡಿಗಢ, ಮಾ. 6: ಕೊರೋನಾ ವೈರಸ್ ಸೋಂಕಿನ ಭೀತಿಯಿಂದ ಇರಾನ್‌ನ 13 ಸದಸ್ಯರಿದ್ದ ಪ್ರವಾಸಿಗರ ತಂಡವನ್ನು ಅಮೃತಸರದ ಹೊಟೇಲೊಂದರಲ್ಲಿ ದಿಗ್ಭಂಧನದಲ್ಲಿ ಇರಿಸಲಾಗಿದೆ.
ಅಲ್ಲದೆ, ವೈದ್ಯಕೀಯ ತಪಾಸಣೆ ಪೂರ್ಣಗೊಳ್ಳುವ ವರೆಗೆ ಹೊರ ಹೋಗದಂತೆ ಅವರಲ್ಲಿ ವಿನಂತಿಸಲಾಗಿದೆ.
ಈ ಪ್ರವಾಸಿಗರ ತಂಡ ಗುರುವಾರ ರಾತ್ರಿ ಅಮೃತಸರ ತಲುಪಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ‘‘ಇವರನ್ನು ಹೊಟೇಲ್ ಕೊಠಡಿಗಳಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿದೆ’’ ಎಂದು ಅಮೃತಸರದ ಸಿವಿಲ್ ಸರ್ಜನ್ ಪ್ರಭದೀಪ್ ಕೌರ್ ಹೇಳಿದ್ದಾರೆ. ನಾವು ಸೂಕ್ತ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದೇವೆ. ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ಪರೀಕ್ಷೆ ಪೂರ್ಣಗೊಳ್ಳುವ ವರೆಗೆ ಹೊಟೇಲ್‌ನಿಂದ ಹೊರ ಹೋಗದಂತೆ ಅವರಲ್ಲಿ ವಿನಂತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ಒಂದು ವೇಳೆ ಯಾರಲ್ಲಾದರೂ ಕೊರೋನಾ ವೈರಸ್ ಸೋಂಕಿನ ಲಕ್ಷಣ ಕಂಡು ಬಂದರೆ, ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಕೊಡಲಾಗುವುದು’’ ಎಂದು ಅವರು ತಿಳಿಸಿದ್ದಾರೆ.