‘ದೇವಸೇನಾ ಪರಿಣಯ ಯಕ್ಷಗಾನ’ ಪ್ರಸಂಗ ಕೃತಿ ಲೋಕಾರ್ಪಣೆ
ಉಡುಪಿ, ಮಾ.6: ಶಿವಮೊಗ್ಗದ ವಿವೇಕಾನಂದ ಬಡಾವಣೆಯ ವಾಸುಕಿ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇತ್ತೀಚೆಗೆ ಯಕ್ಷಗಾನ ಕಲಾಪೋಷಕ ದಿ. ಲಕ್ಷ್ಮೀನಾರಾಯಣಯ್ಯ ಹಲ್ಕೋಡು ಇವರ ಸ್ಮರಣಾರ್ಥ ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ ಬಿ.ಎ.ಅಳಗೋಡು ರಚಿಸಿದ ದೇವಸೇನಾ ಪರಿಣಯ(ಸ್ಕಂದ ವಿಜಯ) ಪೌರಾಣಿಕ ಯಕ್ಷಗಾನ ಪ್ರಸಂಗ ಕೃತಿ ಲೋಕಾರ್ಪಣೆಗೊಂಡಿತು
2019ರಲ್ಲಿ ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್ ನಡೆಸಿದ ರಾಜ್ಯಮಟ್ಟದ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪರಸ್ಕೃತ ಈ ಪ್ರಸಂಗ ಕೃತಿಯನ್ನು ನಾಟಕಕಾರ, ಯಕ್ಷಗಾನ ವಿಮರ್ಶಕ ಗೋಪಾಲಕೃಷ್ಣ ಕೊಳತ್ತಾಯರು ಅನಾವರಣಗೊಳಿಸಿದರು. ವೇ.ಮೂ ಸಂದೇಶ್ ಉಪಾಧ್ಯ, ಅನ್ನಪೂರ್ಣಮ್ಮ ಲಕ್ಷ್ಮೀನಾರಾಯಣಯ್ಯ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಅಕ್ಷಯ ಯಕ್ಷಕೂಟ ನಿಟ್ಟೂರು ಪ್ರಸ್ತುತಿಯಲ್ಲಿ ಪಾದುಕಾ ಪ್ರದಾನ ತಾಳಮದ್ದಳೆ ಸಂಪನ್ನಗೊಂಡಿತು. ಭಾಗವತರಾಗಿ ಕಿರಣ್ ಹೆಗಡೆ, ಹಾಡಿಕೈ ಮದ್ದಲೆಯಲ್ಲಿ ಮಂಜುನಾಥ ಗುಡ್ಡೆದಿಂಬ, ಅವಿನಾಶ್ ವಿಟ್ಲ, ರಾಮನಾಗಿ ಶಿವಕುಮಾರ ಅಳಗೋಡು, ಭರತನಾಗಿ ಆದಿತ್ಯ ಹಲ್ಕೋಡು, ವಸಿಷ್ಠನಾಗಿ ಚಂದನ್ ಕಲಾಹಂಸ, ಲಕ್ಷ್ಮಣನಾಗಿ ರಮೇಶ್ ಐತುಮನೆ ಭಾಗವಹಿಸಿದ್ದರು.