×
Ad

ಉಪ್ಪಿನಂಗಡಿ: ಅತ್ಯಾಚಾರ ಪ್ರಕರಣ ಸಾಬೀತು ; ಅಪರಾಧಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

Update: 2020-03-06 20:37 IST

ಉಪ್ಪಿನಂಗಡಿ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾದ ಬಳಿಕ ನಾಪತ್ತೆಯಾಗಿದ್ದ ಅಪರಾಧಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಮಾ.6ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈತನಿಗೆ ನ್ಯಾಯಾಲಯವು  10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದಕ್ಕಾಗಿ ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ತಾಳೆಹಿತ್ಲು ನಿವಾಸಿ ರವಿ ಟಿ. ನಾಯ್ಕ (33) ಶಿಕ್ಷೆಗೊಳಗಾದ ಅಪರಾಧಿ.

ಘಟನೆಯ ವಿವರ

ಗುಡ್ಡದಲ್ಲಿ ಚಟ್ಟೆ (ಉಡ) ತೋರಿಸುತ್ತೆನೆಂದು ಹೇಳಿ 2016ರ ಅ. 21ರಂದು ಅಪ್ರಾಪ್ತ ಬಾಲಕಿಯನ್ನು ಗುಡ್ಡವೊಂದಕ್ಕೆ ಕರೆದುಕೊಂಡು ಹೋಗಿದ್ದ  ರವಿ ನಾಯ್ಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಅಲ್ಲದೇ, ಈ ವಿಚಾರವನ್ನು ಮನೆಯಲ್ಲಿ ತಂದೆ-ತಾಯಿಗೆ ತಿಳಿಸಿದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆಯೊಡ್ಡಿದ್ದ. ಈತ ಮಗಳ ಮೇಲೆ ಅತ್ಯಾಚಾರವೆಸಗಿದ್ದ ವಿಷಯ ತಿಳಿದ ತಾಯಿಯು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಪೋಕ್ಸೋ ಪ್ರಕರಣದಡಿ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಮಂಗಳೂರಿನ 2ನೇ ಸೆಷನ್ಸ್ ನ್ಯಾಯಾಲಯ (ಪೋಕ್ಸೋ ವಿಶೇಷ ನ್ಯಾಯಾಲಯ)ದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಬಳಿಕ ಪುತ್ತೂರು 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಪುತ್ತೂರು ಹಾಗೂ ಸುಳ್ಯ ತಾಲೂಕಿನ ಪೋಕ್ಸೋ ಪ್ರಕರಣಕ್ಕೆ ವಿಶೇಷ ನ್ಯಾಯಾಲಯವಾಗಿ ಘೋಷಣೆಯಾದ ಬಳಿಕ ಈ ಪ್ರಕರಣವನ್ನು ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ರುಡಾಲ್ಫ್ ಪಿರೇರಾರವರು ಸಾಕ್ಷಿಗಳ ಮುಂದುವರಿದ ವಿಚಾರಣೆ ನಡೆಸಿ, ಇತ್ತಂಡಗಳ ವಾದ ಆಲಿಸಿ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 376 ಮತ್ತು ಕಲಂ 6 ಪೋಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25,000 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷದ ಸಾದಾ ಸ್ವರೂಪದ ಶಿಕ್ಷೆ. ಭಾರತೀಯ ದಂಡ ಸಂಹಿತೆ ಕಲಂ 506ರಡಿ 1 ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ. ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಹಾಗೂ ಕಲಂ 8 ಪೋಕ್ಸೋ ಕಾಯ್ದೆಯಡಿ 3 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ. ದಂಡ ತೆರಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಸ್ವರೂಪದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದ ಮೊತ್ತದಲ್ಲಿ 35 ಸಾವಿರ ರೂ.ವನ್ನು ಸಂತ್ರಸ್ತ ಬಾಲಕಿಗೆ ಪರಿಹಾರದ ರೂಪದಲ್ಲಿ ನೀಡುವುದು ಮತ್ತು ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ದಂ.ಪ್ರ.ಸಂ ಕಲಂ 357(ಎ) ಮತ್ತು ಪೋಕ್ಸೋ ಕಲಂ 33(8)ರ ಪ್ರಕಾರ ಬಾಲಕಿಗೆ 2,50,000 ಪರಿಹಾರ ನೀಡಲು ನ್ಯಾಯಾಲಯವು ಆದೇಶಿಸಿದೆ.

ಸರಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕರಾದ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದರು.

ಅಂದಿನ ಪುತ್ತೂರು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿಯವರು ಆರೋಪಿತನ ವಿರುದ್ಧ ಸಮಗ್ರ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ವಿವರವಾದ ಸಾಕ್ಷಿ ನುಡಿದಿದ್ದರು. ಸರಕಾರದ ಪರವಾಗಿ 12 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿತ್ತು. ಸಂತ್ರಸ್ಥ ಬಾಲಕಿಯನ್ನು ಪರೀಕ್ಷಿಸಿದ್ದ ವೈದ್ಯೆ  ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು.   

ತಪ್ಪಿಸಿಕೊಂಡಿದ್ದ ಅಪರಾಧಿ

ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿಯನ್ನು ತಪ್ಪಿತಸ್ಥ ಎಂದು ಫೆ.14ರಂದು ಘೋಷಿಸಿತ್ತು. ಶಿಕ್ಷೆಯ ಪ್ರಮಾಣ ಪ್ರಕಟನೆಗಾಗಿ ಪ್ರಕರಣವನ್ನು ಫೆ.15ಕ್ಕೆ ಮುಂದೂಡಲಾಗಿತ್ತು. ಆದರೆ ಫೆ.15ರಂದು ಅಪರಾಧಿ ರವಿ ನಾಯ್ಕನು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿ ಕೊಂಡಿದ್ದ. ಅಪರಾಧಿಯು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಹಾಜರುಪಡಿಸುವಂತೆ ವಾರಂಟ್ ಜಾರಿಗೊಳಿಸಿ ಉಪ್ಪಿನಂಗಡಿ ಪೊಲೀಸರಿಗೆ ನ್ಯಾಯಾಲಯವು ಆದೇಶಿಸಿದ್ದಲ್ಲದೆ, ರವಿ ನಾಯ್ಕನ  ಜಾಮೀನು ಆದೇಶ ರದ್ದುಗೊಳಿಸಿ ಜಾಮೀನುದಾರನಿಗೆ ನೊಟೀಸ್ ಜಾರಿ ಮಾಡಿತ್ತು. ಈತನ ಹುಡುಕಾಟ ಆರಂಭಿಸಿದ ಪೊಲೀಸರು ಮಾ.6ರಂದು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಬಳಿ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಉಪ್ಪಿನಂಗಡಿ ಠಾಣಾ ಪಿಎಸ್‍ಐ ಈರಯ್ಯ ಹಾಗೂ ಸಿಬ್ಬಂದಿಗಳಾದ ಹಿತೋಷ್, ಕೃಷ್ಣಪ್ಪ, ಲಿಂಗಪ್ಪ, ಇರ್ಷಾದ್, ನಂಜುಂಡ, ಸ್ಕರಿಯ, ವಸಂತ, ಜಯರಾಮ ರೈ ಈತನ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ನ್ಯಾಯಕ್ಕೆ ಸಂದ ಜಯ: ಜತೀಂದ್ರ ಶೆಟ್ಟಿ

ಈ ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿಗೆ ಬೆಂಬಲವಾಗಿ ನಿಂತು ಆರೋಪಿಗೆ ಶಿಕ್ಷೆಯಾಗುವವರೆಗೆ ಹೋರಾಟ ಮಾಡಿದ ಸಾಮಾಜಿಕ ಕಾರ್ಯಕರ್ತ ಜತೀಂದ್ರ ಶೆಟ್ಟಿ ಪತ್ರಿಕೆಯೊಂದಿಗೆ ಮಾತನಾಡಿ, ನ್ಯಾಯಾಲಯದ ತೀರ್ಪಿನಿಂದ ಸಂತ್ರಸ್ಥೆಯ ತಾಯಿ ಹಾಗೂ ನನ್ನ ಹೋರಾಟಕ್ಕೆ ಇವತ್ತು ಜಯ ಸಿಕ್ಕಿದೆ. ಎಲ್ಲಿಯವರೆಗೆ ಸ್ಥಳೀಯ ಸಂಘ- ಸಂಸ್ಥೆಗಳು, ಸ್ಥಳೀಯ ಪ್ರತಿನಿಧಿಗಳೆನಿಸಿಕೊಂಡವರು ಸಮಾಜದಲ್ಲಿ ಬೇಜಾವಬ್ದಾರಿ ಯಿಂದ ವರ್ತಿಸುತ್ತವೆಯೋ ಅಲ್ಲಿಯವರೆಗೆ ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಎಷ್ಟೇ ಕಠಿಣ ಕಾನೂನುಗಳಿದ್ದರು ಇಂತಹ ಸಮಾಜ ಘಾತುಕ ಶಕ್ತಿಗಳನ್ನು ನಮ್ಮವರೆಂದು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡುವವರು ನಮ್ಮಲ್ಲಿ ಇರುತ್ತಾರೋ ಅಲ್ಲಿಯವರೆಗೆ ಸಂತ್ರಸ್ಥರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಇಲ್ಲೂ ಅದೇ ರೀತಿ ಆಗಿತ್ತು. ಇದರಿಂದಾಗಿ ನಾನು ಕಟ್ಟಿ ಬೆಳೆಸಿದ ಸಂಸ್ಥೆಯಿಂದಲೇ ನಾನು ಹೊರ ಬಂದು ಸಂತ್ರಸ್ಥೆಯ ತಾಯಿಯೊಂದಿಗೆ ನಿಂತು ಹೋರಾಟ ಮಾಡಿದೆ. ಸತ್ಯಕ್ಕೆ ಕೊನೆಗೂ ಜಯ ಸಿಕ್ಕಿದೆ. ಈ ದಿನ ನನ್ನ ಜೀವನದ ಯಶಸ್ಸಿನ ದಿನ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News