ಎನ್‌ಆರ್‌ಸಿ, ಎನ್‌ಪಿಆರ್, ಸಿಎಎ ವಿರುದ್ಧ ಅಸಹಕಾರ ಚಳುವಳಿ : ಹರ್ಷ ಕುಮಾರ್ ಕುಗ್ವೆ ಕರೆ
ಮಂಗಳೂರು, ಮಾ.6: ಕೇಂದ್ರ ಸರಕಾರವು ಜಾರಿಗೊಳಿಸಲಿರುವ ಕಾಯ್ದೆಗಳಾದ ಎನ್‌ಆರ್‌ಸಿ, ಎನ್‌ಪಿಆರ್, ಸಿಎಎ ವಿರುದ್ಧ ಅಸಹಕಾರ ಚಳುವಳಿ ಮಾಡಬೇಕಾಗಿದೆ ಎಂದು ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ಕರೆ ನೀಡಿದ್ದಾರೆ.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ನಗರದ ಪುರಭವನದಲ್ಲಿ ಜರುಗಿದ ‘ಆಝಾದಿ ಕಾನ್ಫರೆನ್ಸ್’ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಎನ್‌ಪಿಆರ್ ಅನುಷ್ಠಾನಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳಿಗೆ ಈಗಾಗಲೆ ತರಬೇತಿ ನೀಡಲಾಗಿದೆ. ಎಪ್ರಿಲ್ 15ರಿಂದ ಇದನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಯಾವುದೇ ಅರ್ಜಿ ಫಾರಂ ಇಲ್ಲ. ಆ್ಯಪ್ ಮೂಲಕ ಮಾಹಿತಿ ಅಪ್‌ಡೇಟ್ ಮಾಡಲಾಗುತ್ತದೆ. ಎನ್‌ಪಿಆರ್ ಮತ್ತು ಜನಗಣತಿ ಬೇರೆ ಬೇರೆಯಾಗಿದೆ. ಎನ್‌ಪಿಆರ್ ಮೂಲಕ ಎನ್‌ಆರ್‌ಸಿಗೆ ಸಿದ್ಧತೆ ಮಾಡಲಾಗುತ್ತದೆ. ಇದು ಕೇವಲ ಮುಸ್ಲಿಮರ ಸಮಸ್ಯೆಯಲ್ಲ. ಇದು ಭಾರತೀಯರೆಲ್ಲರ ಸಮಸ್ಯೆಯಾಗಿದೆ. ಹಾಗಾಗಿ ಪ್ರತೀ ಹಳ್ಳಿಯಲ್ಲಿ ಎಲ್ಲಾ ಸಮುದಾಯವನ್ನು ಒಳಗೊಂಡ ಸಮಿತಿಯ ಮೂಲಕ ಸಂಘಟಿತರಾಗಿ ಕರಾಳ ಕಾಯ್ದೆಗೆ ಯಾವುದೇ ಮಾಹಿತಿ ನೀಡದೆ ಅಸಹಕಾರ ಚಳುವಳಿ ಮಾಡಬೇಕಾಗಿದೆ. ಅನಿವಾರ್ಯವಾದರೆ ಸಾಮೂಹಿಕ ಜೈಲ್‌ಭರೋ ಮಾಡಲು ಕೂಡ ಸಿದ್ಧರಾಗಬೇಕಿದೆ ಎಂದು ಹರ್ಷ ಕುಮಾರ್ ಕುಗ್ವೆ ನುಡಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಈ ಕಾಯ್ದೆಯ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇದನ್ನು ಕೇವಲ ಮುಸ್ಲಿಮರ ಸಮಸ್ಯೆ ಎಂದು ಬಿಂಬಿಸಲಾಗುತ್ತಿದೆ. ಮುಸ್ಲಿಮರು ಕೂಡ ಹಾಗೇ ಭಾವಿಸಿದ್ದಾರೆ. ಇದರ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತುತ್ತಿರುವ ಮುಸ್ಲಿಮರು ಇತರ ಸಮುದಾಯವನ್ನು ಒಳಗೊಳ್ಳುವಿಕೆಯ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗಿದೆ. ಮುಸ್ಲಿಮರು ಮೂಲಭೂತ ಹಕ್ಕಿನ ಪ್ರಶ್ನೆಯನ್ನು ಬದಿಗೆ ಸರಿಸಿ ಕ್ಷಣ ಕ್ಷಣಕ್ಕೂ ದೇಶಪ್ರೇಮವನ್ನು ಪ್ರಕಟಿಸುವಂತಹ ಅತ್ಯಂತ ಜಟಿಲ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಎಚ್ಚೆತ್ತುಕೊಂಡು ಶಾಂತಿಯುತ ಪ್ರತಿಭಟನೆ ಮಾಡಬೇಕಿದೆ ಎಂದರು.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ಕಾರ್ಯಾಧ್ಯಕ್ಷ ಇಬ್ರಾಹೀಂ ಬಾಖವಿ ಕೆಸಿ ರೋಡ್ ಅಧ್ಯಕ್ಷತೆ ವಹಿಸಿದ್ದರು.ಉಳ್ಳಾಲದ ಸೈಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ದುಆಗೈದರು. ಸಮಸ್ಯ ಕೇರಳ ಜಂ- ಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಉದ್ಘಾಟಿಸಿದರು.
ನಾಸರ್ ಫೈಝಿ ಕೂಡತ್ತಾಯಿ, ಅಝೀಝ್ ದಾರಿಮಿ ಚೊಕ್ಕಬೆಟ್ಟು, ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿದರು. ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯಾ, ಜಿಲ್ಲಾ ಜಂ-ಇಯ್ಯತುಲ್ ಮುಅಲ್ಲಿಮೀನ್‌ನ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ, ಶರೀಫ್ ಫೈಝಿ ಕಡಬ, ಮಜೀದ್ ಫೈಝಿ, ಕಾಸಿಂ ದಾರಿಮಿ ಕಿನ್ಯ, ಎಂಎಚ್ ಮಯ್ಯದ್ದಿ ಹಾಜಿ ಅಡ್ಡೂರ್, ಉಮರ್ ಯುಎಚ್, ಇಬ್ರಾಹೀಂ ಕೊಣಾಜೆ ಉಪಸ್ಥಿತರಿದ್ದರು.
ಕೆಬಿ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಪ್ರತಿಜ್ಞಾ ವಿಧಿ ಬೋಧಿಸಿದರು. ಮಾಹಿನ್ ದಾರಿಮಿ ಪಾತೂರ್ ಸ್ವಾಗತಿಸಿದರು. ಡಿ.ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಕೆ.ಎಲ್. ಉಮ್ಮರ್ ದಾರಿಮಿ ಪಟ್ಟೋರಿ ವಂದಿಸಿದರು.