‘ಪ್ರಥಮ ಚಿಕಿತ್ಸೆ, ಮೂಲ ಜೀವಾಧಾರಕ ಚಿಕಿತ್ಸೆ ಬಗ್ಗೆ ಅರಿವು ಅಗತ್ಯ’
ಉಡುಪಿ, ಮಾ.6: ತುರ್ತು ಸಂದರ್ಭ ಹಾಗೂ ಅನಿರೀಕ್ಷಿತ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಪ್ರಥಮ ಚಿಕಿತ್ಸೆ ಹಾಗೂ ಮೂಲ ಜೀವಾಧಾರಕ (ಬೇಸಿಕ್ ಲೈಫ್ ಸಪೋರ್ಟ್) ಚಿಕಿತ್ಸೆ ಬಗ್ಗೆ ಅಗತ್ಯ ಅರಿವು ಹೊಂದಿದ್ದರೆ ಹೃದಯಾಘಾತದಂಥ ಎಷ್ಟೋ ಸಾವು ನೋವು ಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಮಾಹೆಯ ಪ್ರೊವೈಸ್ ಚಾನ್ಸಲರ್ ಹಾಗೂ ಲೈಫ್ ಸಾಯನ್ಸ್‌ನ ಪ್ರಾಧ್ಯಾಪಕ ಡಾ. ಪಿ.ಎಲ್.ಎನ್.ಜಿ. ರಾವ್ ಹೇಳಿದ್ದಾರೆ.
ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆ ಹಾಗೂ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಕಾರ್ಡಿಯೋಲಜಿ ವಿಭಾಗ ಮತ್ತು ಮಾಹೆಯ ಸಿವಿಟಿ, ಎಂಸಿಎಚ್‌ಪಿ ವಿಭಾಗಗಳ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ನಡೆದ ‘ಆಸ್ಪತ್ರೆಯ ಹೊರಗೆ ಹೃದಯಾಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆ ಹಾಗೂ ತಕ್ಷಣದ ಆಧಾರ’ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಇಂದು ವಯಸ್ಸಿನ ಬೇಧವಿಲ್ಲದೇ ಮಗುವಿನಿಂದ ಹಿರಿಯವರೆಗೆ ಎಲ್ಲರಿಗೂ ತುರ್ತು ಚಿಕಿತ್ಸೆಯ ಅಗತ್ಯ ಬಂದೇ ಬರುತ್ತದೆ. ಅದರಲ್ಲೂ ಹೃದಯಾಘಾತಗಳು ಎಲ್ಲೂ, ಯಾವ ಸಂದರ್ಭದಲ್ಲೂ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾದಾಗ ತುರ್ತು ಪ್ರಥಮ ಚಿಕಿತ್ಸೆಯ ಅಗತ್ಯವಿರು ತ್ತದೆ. ಇಂಥ ಪ್ರಾಥಮಿಕ ಚಿಕಿತ್ಸೆಗಳು ದೊರಕಿದರೆ ಬಳಿಕ ಆತನನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ನೀಡಲು ಸಾಧ್ಯವಿದೆ. ಇದಕ್ಕಾಗಿ ನಮಗೆ ಪ್ರಥಮ ಚಿಕಿತ್ಸೆ ಹಾಗೂ ಜೀವಾಧಾರಕ ಚಿಕಿತ್ಸೆಗಳ ಅರಿವು ಅಗತ್ಯವಾಗಿ ಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಇವುಗಳ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಮಾತನಾಡಿ, ಇಂದು ಪ್ರಥಮ ಚಿಕಿತ್ಸೆ ಹಾಗೂ ತುರ್ತು ಸಂದರ್ಭ ದಲ್ಲಿ ಮೂಲ ಜೀವಾಧಾರಕ ಚಿಕಿತ್ಸೆಗಳ ಮಹತ್ವವನ್ನು ವಿವರಿಸಿ, ತುರ್ತು ಸಂದರ್ಭಗಳಲ್ಲಿ ರೋಗಿಗೆ ಇವು ದೊರೆತರೆ ಹೃದಯಾಘಾತದಂಥ ಸಂದರ್ಭಗಳಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಅವರು ಇಂದು ವಿಶ್ವದಾದ್ಯಂತ ಹಾಹಾಕಾರ ಎಬ್ಬಿಸಿರುವ ಕೊರೋನ ವೈರಸ್ ಸೋಂಕಿನ (ಕೋವಿಡ್-19) ಕುರಿತು ಸಮಗ್ರ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಈ ವೈರಸ್ 1989ರಲ್ಲೇ ಕಾಣಿಸಿಕೊಂಡಿರುವ ಮಾಹಿತಿ ಇದ್ದು, ಕಳೆದ ಡಿಸೆಂಬರ್ ತಿಂಗಳಲ್ಲಿ ಚೀನದ ವುಹಾನ್ ನಗರದಲ್ಲಿ ಕಾಣಿಸಿಕೊಂಡು ಮನುಷ್ಯರಿಂದ ಮನುಷ್ಯರಿಗೆ ಹರಡುವ ಮೂಲಕ ವಿಶ್ವದ ಹಲವು ರಾಷ್ಟ್ರಗಳಿಗೆ ಈಗಾಗಲೇ ವ್ಯಾಪಿಸಿದೆ ಎಂದರು.
ಕೊರೋನ ವೈರಸ್ ತುಂಬಾ ಸೌಮ್ಯವಾಗಿದ್ದು, ಇದರ ಕುರಿತು ಆತಂಕಕ್ಕೊಳಗಾಗದೇ ಎಚ್ಚರದಿಂದ ಇದ್ದರೆ ರೋಗದಿಂದ ದೂರವುಳಿಯ ಬಹುದು ಎಂದರು. ವೈರಸ್ ಪೀಡಿತ ವ್ಯಕ್ತಿ ಕೆಮ್ಮು, ಸೀನಿದರೆ, ಉಗುಳಿದರೆ ಅದು ಪಕ್ಕದವರಿಗೆ ಹರಡುತ್ತದೆ. ಹೀಗಾಗಿ ಕೆಮ್ಮು, ಶೀತ, ಜ್ವರ, ಗಂಟಲು ನೋವು ಇರುವ ವ್ಯಕ್ತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕೆಎಂಸಿಯ ವೈದ್ಯರಾದ ಡಾ.ಟಾಮ್ ದೇವಾಸಿಯಾ, ಡಾ.ಕೃಷ್ಣಾನಂದ ನಾಯಕ್ ಉಪಸ್ಥಿತರಿದ್ದರು.
ಕೆಎಂಸಿಯ ಡೀನ್ ಡಾ.ಶರತ್ ಕೆ.ರಾವ್ ಅತಿಥಿಗಳನ್ನು ಸ್ವಾಗತಿಸಿದರೆ, ಮಣಿಪಾಲ ಎಂಸಿಎಚ್‌ಪಿಯ ಡೀನ್ ಡಾ.ಅರುಣ ಮಯ್ಯ ವಂದಿಸಿದರು.