ದಿಲ್ಲಿ ಹಿಂಸಾಚಾರ : ದುಷ್ಕರ್ಮಿಗಳಿಂದ ಆ್ಯಸಿಡ್ ದಾಳಿಗೆ ಒಳಗಾದ ಬಾಲಕಿ ಗುಣಮುಖ

Update: 2020-03-06 16:37 GMT
ಫೈಲ್ ಚಿತ್ರ

ಹೊಸದಿಲ್ಲಿ, ಮಾ. 8: ಈಶಾನ್ಯ ದಿಲ್ಲಿಯಲ್ಲಿ ಕಳೆದ ತಿಂಗಳು ನಡೆದ ಹಿಂಸಾಚಾರದ ಸಂದರ್ಭ ಶಿವವಿಹಾರ್‌ನಲ್ಲಿ ದುಷ್ಕರ್ಮಿಯೊಬ್ಬನ ಆ್ಯಸಿಡ್ ದಾಳಿಯಿಂದ ಗಾಯಗೊಂಡಿದ್ದ 8 ವರ್ಷದ ಬಾಲಕಿ ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ. ಬಾಲಕಿಯ ಕಣ್ಣಿಗೆ ಆದ ಗಾಯ ವಾಸಿಯಾಗಿದೆ. ಆದರೆ, ಕಣ್ಣಿನ ಸುತ್ತ ಇರುವ ಸುಟ್ಟ ಕಲೆ ಆಕೆ ಎದುರಿಸಿದ ಕ್ರೂರತೆಗೆ ಸಾಕ್ಷಿಯಾಗಿದೆ. ಬಾಲಕಿ ಗುಣಮುಖಳಾಗುತ್ತಿದ್ದಾಳೆ. ಆದರೆ, ಗಲಭೆಗೆ ಸಾಕ್ಷಿಯಾದ ಆಕೆಗೆ ಆಗಂತುಕರ ಬಗ್ಗೆ ಭೀತಿ ಇದೆ. ವಿಶೇಷವಾಗಿ ಪುರುಷರ ಬಗ್ಗೆ ಭೀತಿ ಇದೆ. ‘‘ನಾನು ರಸ್ತೆಯಲ್ಲಿ ರಾಡ್ ಹಾಗೂ ಖಡ್ಗ ಹಿಡಿದುಕೊಂಡ ಪುರುಷರನ್ನು ನೋಡಿದೆ. ಇಲ್ಲಿ ಗಲಭೆ ನಿಂತಿತ್ತು. ನಾವು ನಡೆದುಕೊಂಡು ಹೋಗುತ್ತಿದ್ದೆವು. ಯಾರೋ ಒಬ್ಬರು ದ್ರಾವಣವನ್ನು ನನ್ನ ಮೇಲೆ ಎರಚಿದರು. ನನ್ನ ಚರ್ಮ ಸುಡಲು ಆರಂಭವಾಯಿತು. ನಾನು ಅಮ್ಮಾ ಎಂದು ಕೂಗಿಕೊಂಡೆ. ನಾವಿಬ್ಬರು ಅಲ್ಲಿಂದ ಕೂಡಲೇ ಓಡಿದೆವು. ಈಗ ನಾನು ಹೆದರುತ್ತಿದ್ದೇನೆ. ನನಗೆ ಏನನ್ನಾದರೂ ತಿನ್ನಬೇಕು ಎಂದು ಅನ್ನಿಸುತ್ತಿಲ್ಲ’’ ಎಂದು ಬಾಲಕಿ ಹೇಳಿದ್ದಾಳೆ.

ಬಾಲಕಿ ತನ್ನ ತಾಯಿ ಗೀತಾ ಜೊತೆ ಶಿವ ವಿಹಾರ್‌ನಲ್ಲಿ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡು ಗೋಕುಲಪುರಿಯಲ್ಲಿರುವ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ‘‘ಹಿಂಸಾಚಾರ ಪೀಡಿತ ಈ ಪ್ರದೇಶದಲ್ಲಿ ಇರುವುದಕ್ಕಿಂತ ಮನೆಗೆ ಹೋಗುವುದು ಉತ್ತಮ ಎಂದು ನಾನು ಭಾವಿಸಿದೆ. ಬೀದಿಯಲ್ಲಿದ್ದ ಗುಂಪನ್ನು ತಪ್ಪಿಸಿಕೊಂಡು ನಾವು ನಡೆಯುತ್ತಿದ್ದೆವು. ಆಗ ನನ್ನ ಮಗಳು ಕೂಗಿಕೊಂಡಳು. ಆಕೆಯ ಮೇಲೆ ಆ್ಯಸಿಡ್‌ನಂತಹ ದ್ರಾವಣವನ್ನು ದುಷ್ಕರ್ಮಿಗಳು ಎರಚಿದ್ದರು. ಯಾರು ಎರಚಿದರು ಎಂದು ನನಗೆ ಖಚಿತವಾಗಿ ತಿಳಿದಿಲ್ಲ. ಆದರೆ, ಸಮೀಪದ ಮನೆಯಿಂದ ಎರಚಲಾಗಿದೆ. ಆದರೂ ನಾವು ಮನೆ ತಲುಪವಲ್ಲಿ ಸಫಲವಾದೆವು ಎಂದು ಬಾಲಕಿಯ ತಾಯಿ ಗೀತಾ ಹೇಳಿದ್ದಾರೆ.

‘‘ಮನೆಯಲ್ಲಿ ಗಮನಿಸಿದಾಗ ನನ್ನ ಪುತ್ರಿಯ ಕಣ್ಣಿನ ಮೇಲಿನ ಚರ್ಮ ನೇತಾಡುತ್ತಿತ್ತು. ನಾನು ಸ್ಪಲ್ಪ ಎಣ್ಣೆ ಹಚ್ಚಿದೆ. ಅನಂತರ ವೈದ್ಯರು ಕೊಟ್ಟ ಮುಲಾಮು ಹಚ್ಚಿದೆ. ಈಗ ಆಕೆ ಮಾನಸಿಕವಾಗಿ ದೈಹಿಕವಾಗಿ ಸಂಪೂರ್ಣ ಗುಣಮುಖಳಾಗಿದ್ದಾಳೆ’’ ಎಂದು ಗೀತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News