ಪೆಹ್ಲು ಖಾನ್ ಹತ್ಯೆ ಪ್ರಕರಣ: ಇಬ್ಬರು ಅಪ್ರಾಪ್ತರು ತಪ್ಪಿತಸ್ಥರು ಎಂದು ಬಾಲನ್ಯಾಯ ಮಂಡಳಿಯ ತೀರ್ಪು

Update: 2020-03-06 16:38 GMT

ಆಲ್ವಾರ್(ರಾಜಸ್ಥಾನ),ಮಾ.6: ಸುಮಾರು ಮೂರು ವರ್ಷಗಳ ಹಿಂದೆ ಜಿಲ್ಲೆಯ ಬೆಹ್ರೂರ್ ಬಳಿ ಅಕ್ರಮ ಗೋಸಾಗಾಟ ಆರೋಪದಲ್ಲಿ ಹರ್ಯಾಣದ ಹೈನುಗಾರ ಪೆಹ್ಲು ಖಾನ್(55) ಅವರನ್ನು ಥಳಿಸಿ ಹತ್ಯೆಗೈದಿದ್ದ ಗುಂಪಿನಲ್ಲಿದ್ದ ಇಬ್ಬರು ಹದಿಹರೆಯದ ಬಾಲಕರು ತಪ್ಪಿತಸ್ಥರು ಎಂದು ಆಲ್ವಾರ್‌ನ ಬಾಲನ್ಯಾಯ ಮಂಡಳಿ (ಜೆಜೆಬಿ)ಯು ತೀರ್ಪು ನೀಡಿದೆ ಎಂದು ಪ್ರತಿವಾದಿ ಪರ ವಕೀಲ ಆದರ್ಶ ಯಾದವ ಅವರು ಶುಕ್ರವಾರ ತಿಳಿಸಿದರು.

 2017,ಎಪ್ರಿಲ್ 1ರಂದು ಜೈಪುರದ ಸಾಪ್ತಾಹಿಕ ಜಾನುವಾರು ಸಂತೆಯಲ್ಲಿ ಹೈನುಗಾರಿಕೆಗಾಗಿ ದನಗಳನ್ನು ಖರೀದಿಸಿದ್ದ ಖಾನ್ ಅವುಗಳನ್ನು ತನ್ನಿಬ್ಬರು ಪುತ್ರರೊಂದಿಗೆ ಸ್ವಗ್ರಾಮ ಹರ್ಯಾಣದ ನುಹ್‌ಗೆ ಸಾಗಿಸುತ್ತಿದ್ದಾಗ ಬೆಹರೂರ್ ಬಳಿ ವಾಹನವನ್ನು ಅಡ್ಡಗಟ್ಟಿದ್ದ ತಥಾಕಥಿತ ಗೋರಕ್ಷಕರ ಗುಂಪು ದನಗಳ ಕಳ್ಳ ಸಾಗಾಣಿಕೆಯ ಆರೋಪದಲ್ಲಿ ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಖಾನ್ ಎ.3ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಖಾನ್ ಮೇಲಿನ ದಾಳಿಯ ನೇತೃತ್ವ ವಹಿಸಿದ್ದ,ಕೊಲೆ,ದಂಗೆ ಇತ್ಯಾದಿ ಆರೋಪಗಳನ್ನು ಎದುರಿಸುತ್ತಿದ್ದ ಆರು ಆರೋಪಿಗಳನ್ನು ಆಳ್ವಾರ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ಎಡಿಜೆ)ವು ಕಳೆದ ವರ್ಷ ಸಂಶಯದ ಲಾಭ ನೀಡಿ ಬಿಡುಗಡೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರವು ರಾಜಸ್ಥಾನ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದೆ.

ಪ್ರಕರಣದಲ್ಲಿ ಮೊದಲ ಬಾರಿಗೆ ದೋಷನಿರ್ಣಯಗೊಂಡಿರುವ ಇಬ್ಬರು ಬಾಲಕರಿಗೆ ಶಿಕ್ಷೆಯನ್ನು ಜೆಜೆಬಿ ಶನಿವಾರ ಪ್ರಕಟಿಸಲಿದೆ. ಆದರೆ ದೇಶದ ಬಾಲನ್ಯಾಯ ಕಾನೂನಿನಂತೆ ಅವರನ್ನು ಗರಿಷ್ಠ ಮೂರು ವರ್ಷಗಳ ಅವಧಿಗೆ ದಿಗ್ಬಂಧನದಲ್ಲಿರಿಸಬಹುದು.

 ತಾನಿನ್ನೂ ಆದೇಶದ ಪ್ರತಿಯನ್ನು ನೋಡಿಲ್ಲ.ಹೀಗಾಗಿ ಬಾಲಾರೋಪಿಗಳ ದೋಷನಿರ್ಣಯಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಶಿಕ್ಷೆ ಘೋಷಣೆಯಾದ ಬಳಿಕವಷ್ಟೇ ಅದು ಗೊತ್ತಾಗಲಿದೆ ಎಂದು ಯಾದವ ಹೇಳಿದರು.

16 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಇನ್ನೋರ್ವ ಆರೋಪಿಯು ಬೇರೊಂದು ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಆಲ್ವಾರ್ ಜೆಜೆಬಿ 16ಕ್ಕಿಂತ ಕಡಿಮೆ ಪ್ರಾಯದವರ ವಿಚಾರಣೆ ನಡೆಸುತ್ತದೆ.

ಜೆಜೆಬಿ ವಿಚಾರಣೆಯಲ್ಲಿ ಬಳಸಲಾದ ಸಾಕ್ಷ್ಯದ ಬಗ್ಗೆ ತನಗೆ ಗೊತ್ತಿಲ್ಲ. ಆದೇಶವನ್ನು ಓದಿದ ಬಳಿಕವಷ್ಟೇ ತೀರ್ಪಿನ ಬಗ್ಗೆ ತಾನು ಪ್ರತಿಕ್ರಿಯಿಸಬಹುದು. ಬಾಲನ್ಯಾಯ ಮಂಡಳಿಯಲ್ಲಿ ವಿಚಾರಣೆ ಸಂದರ್ಭ ಮುಖ್ಯ ಪ್ರಕರಣದಲ್ಲಿಯ ಲೋಪಗಳನ್ನು ನಿವಾರಿಸಿಕೊಂಡಿರಬಹುದು ಎಂದು ಎಡಿಜೆ ನ್ಯಾಯಾಲಯದ ಎಪಿಪಿ ಯೋಗೇಂದ್ರ ಖಟಾನಾ ತಿಳಿಸಿದರು.

ಜೆಜೆಬಿ ತೀರ್ಪು ಮುಖ್ಯ ಪ್ರಕರಣದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಎಡಿಜೆ ನ್ಯಾಯಾಲಯದಲ್ಲಿ ಆರೋಪಿಗಳ ಪರ ವಾದಿಸಿದ್ದ ಹುಕುಂ ಚಂದ್ ಶರ್ಮಾ ಹೇಳಿದರೆ,ಜೆಜೆಬಿ ತೀರ್ಪು ಮಹತ್ವದ ಬೆಳವಣಿಗೆಯಾಗಿದ್ದು,ಮೇಲ್ಮನವಿ ವಿಚಾರಣೆ ಸಂದರ್ಭ ಅದನ್ನು ಖಂಡಿತವಾಗಿಯೂ ಬಳಸಿಕೊಳ್ಳಲಾಗುವುದು ಎಂದು ರಾಜಸ್ಥಾನ ಉಚ್ಚ ನ್ಯಾಯಾಲಯದಲ್ಲಿ ಸರಕಾರದ ಪರ ವಾದಿಸಲಿರುವ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆರ್.ಪಿ.ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News