ಕೊರೋನದಿಂದ ಭಾರತದ ಐಟಿ ರಂಗಕ್ಕೆ ದುಷ್ಪರಿಣಾಮ: ಉದ್ಯಮ ತಜ್ಞರ ಆತಂಕ

Update: 2020-03-06 16:45 GMT

ಬೆಂಗಳೂರು, ಮಾ.6: ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಹಲವಾರು ರಾಷ್ಟ್ರಗಳಿಗೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತಿತರ ಸೇವಾವಲಯಗಳ ಮೇಲೆ ಗಂಭೀರವಾದ ಪರಿಣಾಮ ಉಂಟಾಗಿದೆ ಎಂದು ನಾಸ್ಸ್‌ಕಾಮ್ ಸಂಸ್ಥೆಯ ಅಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದ್ದಾರೆ. ಕೊರೋನ ಸೋಂಕಿನ ಭೀತಿಯಿಂದಾಗಿ ಸಾಗರೋತ್ತರ ಹಾಗೂ ಅಂತರ್‌ರಾಷ್ಟ್ರೀಯ ಪ್ರಯಾಣದ ಮೇಲೆ ಪ್ರತಿಕೂಲ ಪರಿಣಾಮವಾಗಿದೆ ಎಂದು ಅವರು ಹೇಳಿದ್ದಾರೆ.

‘‘ಐಟಿ ವಲಯದ ಕಾರ್ಯನಿರ್ವಹಣೆಯಲ್ಲಿಯೂ ನಿರ್ದಿಷ್ಟ ಶೇಕಡವಾರು ಪ್ರಮಾಣದಲ್ಲಿ ಪ್ರಯಾಣ ಹಾಗೂ ಮುಖಾಮುಖಿ ಮಾತುಕತೆಯ ಅವಶ್ಯಕತೆಯಿರುತ್ತದೆ. ಆದರೆ ಅದನ್ನು ಸಂಪೂರ್ಣವಾಗಿ ರದ್ದುಪಡಿಸುವುದರಿಂದ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’’ ಎಂದು ಆರ್.ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.

ಐಟಿ ಕಚೇರಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಕಾರ್ಯನಿರ್ವಹಿಸುವುದರಿಂದ ಅಲ್ಲಿ ವೈರಸ್ ಸೋಂಕಿನ ಒಂದೇ ಒಂದು ಪ್ರಕರಣ ಪತ್ತೆಯಾದರೂ ಕೆಲವೊಂದು ಬಗೆಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಯುಂಟಾಗುತ್ತದೆ ಎಂದು ಮಾಜಿ ಟಾಲಿಕಾಂ ಆಯೋಗದ ಅಧ್ಯಕ್ಷರಾದ ಚಂದ್ರಶೇಖರ್ ಅಭಿಪ್ರಾಯಿಸಿದರು.

  ಕೊರೋನಾ ಬಾಧೆಯಿಂದ ತತ್ತರಿಸಿರುವ ಚೀನಾದಿಂದ ಐಟಿವಲಯಕ್ಕೆ ಹಾರ್ಡ್‌ವೇರ್‌ಸೇರಿದಂತೆ ವಸ್ತುಗಳ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಯು ಒಂದೆರಡು ತಿಂಗಳುಗಳವರೆಗೂ ಮುಂದುವರಿದಲ್ಲಿ ದೊಡ್ಡ ಸಮಸ್ಯೆಯಾಗಲಾರದು ಆದರೆ ಕೊರೋನ ವೈರಸ್ ಸೋಂಕು ಹರಡುವಿಕೆಯು ಈ ವರ್ಷದ ಕೊನೆಯವರೆಗೂ ಮುಂದುವರಿದಲ್ಲಿ ಐಟಿ ವಲಯದ ಮೇಲೆ ಗಂಭೀರ ಪರಿಣಾಮವುಂಟಾಗಲಿದೆ ಎಂದು ಚಂದ್ರಶೇಖರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News