ತೋನ್ಸೆ ಗ್ರಾಪಂ: ನೀರು ಬಳಕೆದಾರರಿಗೆ ಸೂಚನೆ
ಉಡುಪಿ, ಮಾ.6: ತಾಲೂಕು ವ್ಯಾಪ್ತಿಯ ಪಡುತೋನ್ಸೆ ಗ್ರಾಮದ 31ನೇ ತೋನ್ಸೆ (ಕೆಮ್ಮಣ್ಣು) ಗ್ರಾಪಂನಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತಿದ್ದ, ರಾಷ್ಟ್ರೀಯ ಗ್ರಾಮೀಣ ತ್ವರಿತ ನೀರು ಸರಬರಾಜು ಯೋಜನೆಯಡಿ 1988-89ರಲ್ಲಿ ನಿರ್ಮಾಣವಾಗಿದ್ದ ಪ್ರಮುಖ ಬಾವಿಯು ಕುಸಿಯುತ್ತಿರುವುದರಿಂದ ಅದನ್ನು ದುರಸ್ತಿಗೊಳಿಸುವ ಕಾಮಗಾರಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೈಗೆತ್ತಿ ಕೊಳ್ಳಲಾಗಿದೆ.
ಇದರಿಂದಾಗಿ ಗ್ರಾಪಂ ಪ್ರದೇಶಕ್ಕೊಳಪಡುವ ಕುಡಿಯುವ ನೀರಿನ ಸಂಪರ್ಕ ವನ್ನು ಪಡೆದುಕೊಂಡ ನೀರು ಬಳಕೆದಾರರು ಕುಡಿಯುವ ನೀರನ್ನು ಮಿತವಾಗಿ ಬಳಸಬೇಕಾದ ಅನಿವಾರ್ಯತೆ ಉಂಟಾಗಿದೆ. ಸ್ವಜಲಧಾರ ಯೋಜನೆಯಡಿ ನಿರ್ಮಿಸಲಾದ ಬಾವಿ ಮತ್ತು ಇತರ ಜಲ ಮೂಲವನ್ನು ಆಶ್ರಯಿಸಿಕೊಂಡು ಕುಡಿಯಲು ನೀರು ಸರಬರಾಜು ಮಾಡಲಾಗುತ್ತಿದೆ.
ಆದರೆ ಗ್ರಾಮದ ಕೆಲವರು ನೀರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ದೂರುಗಳು ಬಂದಿದ್ದು, ಇದರಿಂದ ಗ್ರಾಮದ ಕೆಲವು ಪ್ರದೇಶಗಳಲ್ಲಿ ಹೆಚ್ಚು ನೀರು ಮತ್ತು ಕೆಲವು ಪ್ರದೇಶಗಳಿಗೆ ನೀರೇ ತಲುಪದ ಪರಿಸ್ಥಿತಿ ಉಂಟಾಗಿದೆ.
ಆದುದರಿಂದ ಕುಡಿಯುವ ನೀರಿನ ಸಂಪರ್ಕವನ್ನು ಪಡೆದವರು ತಾವು ಪಡಕೊಂಡ ಸಂಪರ್ಕದಿಂದ ಲಭಿಸುವ ನೀರನ್ನು ಕುಡಿಯಲು ಮಾತ್ರ ಬಳಸಿ ಕೊಂಡು ಇತರರಿಗೂ ಕುಡಿಯುವ ನೀರು ಒದಗುವಂತೆ ಮಾಡಬೇಕು. ಇಲ್ಲವಾದಲ್ಲಿ ಗ್ರಾಪಂ ನಿರ್ಣಯ ಹಾಗೂ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ನಿಯಮಾವಳಿಗಳ ಪ್ರಕಾರ ನೀರನ್ನು ದುರುಪಯೋಗ ಪಡಿಸುವವರ ಸಂಪರ್ಕವನ್ನು ಗ್ರಾಪಂ ನಿಂದಲೇ ಕಡಿತಗೊಳಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ತೋನ್ಸೆ (ಕೆವ್ಮುಣ್ಣು) ಗ್ರಾಪಂನ ಪ್ರಕಟಣೆ ತಿಳಿಸಿದೆ.