ಬಾಣಂತಿ ಮೃತ್ಯು: ಸರಕಾರಿ ವೈದ್ಯರ ನಿರ್ಲಕ್ಷ ಆರೋಪ
ಕಾರ್ಕಳ, ಮಾ.6: ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಮಗುವಿಗೆ ಜನ್ಮ ನೀಡಿದ ಬಾಣಂತಿಯೊಬ್ಬರು 10 ದಿನಗಳ ಬಳಿಕ ಚಿಕಿತ್ಸೆ ಫಲ ಕಾರಿಯಾಗದೆ ಮೃತಪಟ್ಟಿದ್ದು, ಇದಕ್ಕೆ ಸರಕಾರಿ ವೈದ್ಯಾಧಿಕಾರಿಯ ನಿರ್ಲಕ್ಷವೇ ಕಾರಣ ಎಂದು ದೂರಲಾಗಿದೆ.
ಮೃತರನ್ನು ಮುಂಡ್ಕೂರಿನ ಯೋಗಿತ್ ಆಚಾರ್ಯ(31) ಎಂದು ಗುರುತಿಸ ಲಾಗಿದೆ. ಎರಡನೇ ಹೆರಿಗೆಯ ಉದ್ದೇಶದಿಂದ ಇವರು ಫೆ.22ರಂದು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಫೆ.24ರಂದು ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿದ್ದರು. ನಂತರ ಆಕೆಗೆ ಮೂತ್ರ ವಿರ್ಸಜನೆ ತೊಂದರೆ ಆಗಿದ್ದಲ್ಲದೆ, ಬಿಳಿ ರಕ್ತಕಣಗಳು ಕಡಿಮೆಯಾಗಿರುವ ಕಾರಣ ಆಕೆಯನ್ನು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖ ಲಿಸಲಾಯಿತು.
ಅಲ್ಲಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮಾ.5ರಂದು ಸಂಜೆ 5ಗಂಟೆ ಸುಮಾರಿಗೆ ಆಕೆ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಈಕೆಯ ಮರಣಕ್ಕೆ ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯವರ ನಿರ್ಲಕ್ಷತನವೇ ಕಾರಣ ಎಂದು ಮೃತರ ಸಹೋದರ ಸತೀಶ್ ಆಚಾರ್ಯ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.