ಮುಂಬೈ ಭಾಗ್ ಪ್ರತಿಭಟನಾ ಶಿಬಿರದ ಮೇಲೆ ಮುಂಜಾನೆ ಪೊಲೀಸ್ ದಾಳಿ : ಆರೋಪ
ಮುಂಬೈ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಂಬೈ ಭಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶಿಬಿರದ ಮೇಲೆ ಪೊಲೀಸರು ತಡರಾತ್ರಿ ದಾಳಿ ಮಾಡಿರುವ ಘಟನೆ ವರದಿಯಾಗಿದೆ.
ಬಹುತೇಕ ಮಹಿಳೆಯರೇ ಇದ್ದ ಪ್ರತಿಭಟನಾ ಶಿಬಿರದ ಮೇಲೆ ಶುಕ್ರವಾರ ನಸುಕಿನ 4 ಗಂಟೆಯ ವೇಳೆ ಪೊಲೀಸರು ದಾಳಿ ನಡೆಸಿದ್ದಾಗಿ ಮಹಿಳೆಯರು ದೂರಿದ್ದಾರೆ. ಆದರೆ ಅಂಥ ಘಟನೆ ನಡೆದೇ ಇಲ್ಲ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಶಿಬಿರದಲ್ಲಿ ಮಹಿಳೆಯರು ಮಲಗಿ ನಿದ್ರಿಸುತ್ತಿದ್ದ ವೇಳೆ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಘಟನೆ ಬಳಿಕ ಹಲವು ಮಹಿಳೆಯರು ಚೀರಾಡುತ್ತಿರುವ ಮತ್ತು ಮೂರ್ಛೆ ತಪ್ಪಿದ ದೃಶ್ಯಾವಳಿಯನ್ನು ಒಳಗೊಂಡ ವೀಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಾನಿರತರಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ನೀಲಿ ಬಣ್ಣ ಟರ್ಪಲ್ ಹೊದಿಸಿದ್ದೇ ದಾಳಿಗೆ ಮೂಲ ಕಾರಣ ಎನ್ನುವುದು ಪ್ರತಿಭಟನಾಕಾರರ ಆರೋಪ. "ಕೆಲ ದಿನಗಳಿಂದ ಬಿಸಿಲಿನ ಝಳ ಜೋರಾಗಿದೆ. ಪ್ರತಿದಿನ ಮಹಿಳೆಯರು ಬಿಸಿಲಿಗೆ ಕುಳಿತು ಸುಸ್ತಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಣ್ಣ ಟಾರ್ಪಲಿನ್ ಶೀಟ್ ಅಳವಡಿಸಿದ್ದೆವು. ರಾತ್ರಿ ಪೊಲೀಸರು ಬಂದು ನಮ್ಮನ್ನು ಥಳಿಸಿದರು. ಬಳಿಕ ಶೀಟ್ ವಶಪಡಿಸಿಕೊಂಡರು’ ಎಂದು ಪ್ರತಿಭಟನಾಕಾರರ ಪೈಕಿ ಒಬ್ಬರಾದ ಬರೀರಾ ವಿವರಿಸಿದರು. ಮೊರ್ಲಾಂಡ್ ರಸ್ತೆಯಲ್ಲಿನ ಮುಂಬೈ ಭಾಗ್‌ನಲ್ಲಿ ಜ.26ರಿಂದ ಪ್ರತಿಭಟನೆ ನಡೆಯುತ್ತಿದೆ.
ಶಹೀನ್ ಭಾಗ್ ಹೋರಾಟದ ಮಾದರಿಯಲ್ಲಿ ನಾಗಪಾದ ಪ್ರದೇಶದಲ್ಲೂ ದೊಡ್ಡ ಸಂಖ್ಯೆಯ ಪ್ರತಿಭಟನಾಕಾರರು ಹೋರಾಟ ನಡೆಸುತ್ತಿದ್ದಾರೆ. ಅಂತೆಯೇ ನಗರದ ಹಲವು ಕಡೆಗಳಲ್ಲಿ ಇಂಥ ಪ್ರತಿಭಟನೆಗಳು ನಡೆಯುತ್ತಿವೆ. ಸಣ್ಣ ಪ್ರಮಾಣಲ್ಲಿ ಆರಂಭವಾದ ಮುಂಬೈ ಪ್ರತಿಭಟನೆಯಲ್ಲಿ ಇದೀಗ 300ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುತ್ತಿದ್ದಾರೆ. ಸರದಿಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಆದರೆ ರಾತ್ರಿ ವೇಳೆ ಕೆಲ ಮಹಿಳೆಯರು ಮಾತ್ರ ಶಿಬಿರದಲ್ಲಿರುತ್ತಾರೆ. ಮಹಿಳೆಯರ ಸುರಕ್ಷೆಗಾಗಿ ಸುತ್ತ ಮುತ್ತ ಕೆಲ ಪುರುಷರು ಕಾವಲು ಕಾಯುತ್ತಾರೆ.
ಮುಂಜಾನೆಯ ನಮಾಝ್ ಗೆ ಪುರುಷರು ತೆರಳಿದ ತಕ್ಷಣ ಪೊಲೀಸರು ಪ್ರತಿಭಟನಾ ಸ್ಥಳದ ಮೇಲೆ ದಾಳಿ ಮಾಡಿದ್ದಾಗಿ ಮಹಿಳೆಯರು ದೂರಿದ್ದಾರೆ. ಪೊಲೀಸರು ಈ ದಾಳಿಗಾಗಿ ಕಾಯುತ್ತಿದ್ದರು. ತಕ್ಷಣ ಇತರ ಪುರುಷರಿಗೆ ಹಾಗೂ ಬೆಂಬಲಿಗರಿಗೆ ಕರೆ ಮಾಡಿದೆವು. ತಕ್ಷಣವೇ ಬಹಳಷ್ಟು ಮಂದಿ ಜಮಾಯಿಸಿದರು ಎಂದು ಪ್ರತಿಭನಾಕಾರರೊಬ್ಬರು ವಿವರಿಸಿದರು.