ಎರಡು ಮಲಯಾಳಂ ಸುದ್ದಿವಾಹಿನಿಗಳ ವಿರುದ್ಧ ಹೇರಿದ್ದ ನಿಷೇಧ ಹಿಂಪಡೆದ ಕೇಂದ್ರಸರಕಾರ
ಹೊಸದಿಲ್ಲಿ, ಮಾ.7: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಉಂಟಾದ ದಿಲ್ಲಿಯ ಹಿಂಸಾಚಾರದ ಘಟನೆಯ ಬಗ್ಗೆ ವರದಿ ಪ್ರಸಾರ ಮಾಡಿದ್ದಕ್ಕೆ ಎರಡು ಕೇರಳ ಮೂಲದ ಸುದ್ದಿವಾಹಿನಿಗಳಿಗೆ ಹೇರಲಾಗಿದ್ದ ನಿಷೇಧವನ್ನು ಶನಿವಾರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಹಿಂಪಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರದ ಸುದ್ದಿಯನ್ನು ಪ್ರಸಾರ ಮಾಡಿದ್ದ ಎರಡು ಮಲಯಾಳಂ ಸುದ್ದಿವಾಹಿನಿಗಳಾದ ಏಶ್ಯ ನೆಟ್ ನ್ಯೂಸ್ ಹಾಗೂ ಮೀಡಿಯಾ ಒನ್‌ನ್ನು 48 ಗಂಟೆಗಳ ಕಾಲ ನಿಷೇಧಿಸಲಾಗಿತ್ತು. ಹಿಂಸಾಚಾರವನ್ನು ಪ್ರಸಾರ ಮಾಡುವ ಮುಖಾಂತರ ಸುದ್ದಿವಾಹಿನಿಗಳು ಕೋಮು ಸಾಮರಸ್ಯವನ್ನು ಕದಡಿವೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಹೇಳಿತ್ತು.
ಏಶ್ಯನ್ ನೆಟ್ ನ್ಯೂಸ್ ಚಾನಲ್ ಮೇಲಿನ ನಿಷೇಧವನ್ನು ಶನಿವಾರ ರಾತ್ರಿ 1:30ಕ್ಕೆ ಹಾಗೂ ಮೀಡಿಯಾ ಒನ್ ವಿರುದ್ಧದ ನಿಷೇಧ ಬೆಳಗ್ಗೆ 9:30ಕ್ಕೆ ಹಿಂಪಡೆಯಲಾಗಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಮೂಲಗಳು ಪಿಟಿಐಗೆ ತಿಳಿಸಿವೆ.
ನಿಷೇಧವನ್ನು ಹಿಂಪಡೆಯುವಂತೆ ಎರಡೂ ಚಾನಲ್‌ಗಳು ಸಚಿವಾಲಯಕ್ಕೆ ಪತ್ರ ಬರೆದಿದ್ದವು. ಮನವಿ ಮೇರೆಗೆ ನಿಷೇಧ ಹಿಂಪಡೆಯಲಾಗಿದೆ ಎಂದು ಪಿಟಿಐ ಮೂಲಗಳು ತಿಳಿಸಿವೆ.