ಉಡುಪಿ: ಶಂಕಿತರಲ್ಲಿ ಕೊರೊನಾ ವೈರಸ್ ಸೋಂಕಿಲ್ಲ
ಉಡುಪಿ, ಮಾ. 7: ಶಂಕಿತ ಕೊರೊನಾ ವೈರಸ್ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಕಾರ್ಕಳ ತಾಲೂಕು ಮುನಿಯಾಲಿನ 75 ವರ್ಷ ವಯಸ್ಸಿನ ವ್ಯಕ್ತಿಯ ಗಂಟಲು ದ್ರವದಲ್ಲಿ ಈ ವೈರಸ್ ಪತ್ತೆಯಾಗಿಲ್ಲ ಎಂದು ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವೈರಲ್ ಪತ್ತೆ ಪ್ರಯೋಗಾಲಯ (ವಿಡಿಎಲ್)ನ ವರದಿ ತಿಳಿಸಿದೆ.
ಈ ವರದಿ ಇಂದು ಸಂಜೆ ಜಿಲ್ಲಾಡಳಿತದ ಕೈಸೇರಿದ್ದು, ಇವರಲ್ಲಿ ಯಾವುದೇ ರೀತಿಯ ಕೋವಿಡ್-19ಸೋಂಕು ಪತ್ತೆಯಾಗಿಲ್ಲ ಎಂದು ವರದಿ ಧೃಢಪಡಿಸಿದೆ.
ಮುನಿಯಾಲಿನ ವೃದ್ಧರು ತಮ್ಮ ಪತ್ನಿಯೊಂದಿಗೆ ಇಸ್ರೇಲಿನಲ್ಲಿರುವ ತಮ್ಮ ಪುತ್ರನ ಮನೆಗೆ ತೆರಳಿ ಕಳೆದ ಬುಧವಾರ ಹುಟ್ಟೂರಿಗೆ ಹಿಂದಿರುಗಿದ್ದರು. ಅಧಿಕ ರಕ್ತದೊತ್ತಡ, ಮಧುಮೇಹದೊಂದಿಗೆ ಲಘುವಾದ ಅಸ್ತಮಾವನ್ನು ಹೊಂದಿದ್ದ ಇವರಲ್ಲಿ ಕೊರೊನಾ ವೈರಸ್‌ನ ಪ್ರಾಥಮಿಕ ಚಿಹ್ನೆಗಳಾದ ನೆಗಡಿ ಹಾಗೂ ಕೆಮ್ಮು ಇದ್ದ ಮಾಹಿತಿ ಪಡೆದ ಆರೋಗ್ಯ ಇಲಾಖೆ ತನ್ನ 108 ವಾಹನವನ್ನು ಅವರ ಮನೆಗೆ ಕಳುಹಿಸಿ ಬುಧವಾರ ರಾತ್ರಿ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ದಾಖಲು ಮಾಡಿತ್ತು. ಆದರೆ ಅವರ ಪತ್ನಿಯಲ್ಲಿ ಯಾವುದೇ ರೋಗ ಲಕ್ಷಣ ಕಂಡುಬಂದಿರಲಿಲ್ಲ.
ಬುಧವಾರ ಮುಂಜಾನೆ ಅವರ ಗಂಟಲಿನ ದ್ರವವನ್ನು ರೋಗ ಪತ್ತೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಶುಕ್ರವಾರ ಸ್ಯಾಂಪಲ್‌ನ ಪರೀಕ್ಷೆ ನಡೆದಿದ್ದು, ಇಂದು ಅದರ ವರದಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ವರದಿಯಲ್ಲಿ ಇವರಲ್ಲಿ ವೈರಸ್ ಸೋಂಕು ಕಂಡುಬಂದಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಇವರನ್ನು ಇಂದು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.
ಫೆ.5ರಂದು ಚೀನದಿಂದ 15 ದಿನಗಳ ಮೊದಲು ಹುಟ್ಟೂರಿಗೆ ಆಗಮಿಸಿದ ನಾಲ್ಕು ವರ್ಷದ ಹೆಣ್ಣು ಮಗು ಸೇರಿದಂತೆ ಒಟ್ಟು ಮೂರು ಮಂದಿ ಯಲ್ಲಿ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಪ್ರತ್ಯೇಕಿತ ವಾರ್ಡ್‌ಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಮೂವರ ಗಂಟಲು ದ್ರವದ ಸ್ಯಾಂಪಲ್‌ಗಳಲ್ಲೂ ಕೊರೊನಾ ವೈರಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ಮೂವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು.