×
Ad

ಮಾ.9: ಬಡಗುಬೆಟ್ಟು ಸೊಸಾಟಿಯ 10ನೇ ಶಾಖೆ ಉದ್ಘಾಟನೆ

Update: 2020-03-07 21:00 IST

 ಉಡುಪಿ, ಮಾ.7: ಇತ್ತೀಚೆಗಷ್ಟೇ ಶತಮಾನೋತ್ಸವವನ್ನು ಆಚರಿಸಿದ ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸಾಟಿಯ ನೂತನ ಸಂಪೂರ್ಣ ಹವಾನಿಯಂತ್ರಿತ 10ನೇ ಮಣಿಪಾಲ ಶಾಖೆಯ ಉದ್ಘಾಟನೆ ಮಾ.9ರ ಸೋಮವಾರ ಬೆಳಗ್ಗೆ 10 ಕ್ಕೆ ಮಣಿಪಾಲದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಇಂದು ಸುಮಾರು 30ಸಾವಿರ ಸದಸ್ಯರನ್ನು 4.27 ಕೋಟಿ ರೂ.ಪಾಲು ಹಣ, 328 ಕೋಟಿ ರೂ.ಠೇವಣಿ ಹಾಗೂ 269 ಕೋಟಿ ರೂ. ಸಾಲವನ್ನು ಹೊಂದಿದೆ. ಸಂಘದ ವಾರ್ಷಿಕ ವಹಿವಾಟು ದಿನವೊಂದಕ್ಕೆ ಸರಾಸರಿ 4.25 ಕೋಟಿ ರೂ.ಮೀರಿದೆ ಎಂದು ವಿವರಿಸಿದರು.

ಸಂಘ ಉಡುಪಿ ಆಸುಪಾಸಿನಲ್ಲಿ ಮಿಷನ್ ಕಾಂಪೌಂಡ್‌ನಲ್ಲಿ ಸುಸಜ್ಜಿತವಾದ ಮುಖ್ಯ ಶಾಖೆ ಹಾಗೂ ಎಂಟು ಶಾಖೆಗಳನ್ನು ಹೊಂದಿದೆ. ಇವುಗಳಲ್ಲಿ 8 ಸ್ವಂತ ಕಟ್ಟಡದಲ್ಲಿವೆ. ಇದೀಗ 10ನೇ ಶಾಖೆಯನ್ನು ಮಣಿಪಾಲದಲ್ಲಿ ತೆರೆಯ ಲಾಗುತ್ತಿದೆ. ಇದು ಸಹ ಉಳಿದ ಶಾಖೆಗಳಂತೆ ಸಂಪೂರ್ಣ ಹವಾನಿಯಂತ್ರಿತ ವಾಗಿರುತ್ತದೆ ಎಂದರು.

ಬಡಗುಬೆಟ್ಟು ಸೊಸಾಟಿಯು ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 13 ಜಿಲ್ಲಾ ಪ್ರಶಸ್ತಿಗಳು, 5 ರಾಜ್ಯಮಟ್ಟದ ಪ್ರಶಸ್ತಿಗಳೊಂದಿಗೆ ಎರಡು ಬಾರಿ ಸತತವಾಗಿ ಕೇಂದ್ರ ಸರಕಾರದಿಂದ ‘ಎನ್‌ಸಿಡಿಸಿ ಎವಾರ್ಡ್ ಫಾರ್ ಕೋ ಆಪರೇಟಿವ್ ಎಕ್ಸಲೆನ್ಸ್’ ಪ್ರಶಸ್ತಿಯನ್ನು ಪಡೆದಿದೆ ಎಂದು ಸಂಜೀವ ಕಾಂಚನ್ ತಿಳಿಸಿದರು.

ಮಣಿಪಾಲ ಶಾಖೆಯನ್ನು ಮಣಿಪಾಲ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಮಾ.9ರ ಬೆಳಗ್ಗೆ 10ಕ್ಕೆ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಆರ್ಶೀವಚನ ನೀಡಲಿದ್ದಾರೆ. ಎಸ್‌ಸಿಡಿಡಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ದೀಪ ಬೆಳಗಿಸಲಿ ದ್ದಾರೆ. ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಹೆ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಇತರರು ಮುಖ್ಯ ಅತಿಥಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾದ ಎಲ್.ಉಮಾನಾಥ್, ಶತಮಾನೋತ್ಸವ ಸಮಿತಿ ಸಂಚಾಲಕ ಹಾಗೂ ನಿರ್ದೇಶಕರಾದ ಪುರುಷೋತ್ತಮ ಪಿ.ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News