×
Ad

ಪರ್ಯಾಯ ಅದಮಾರು ಮಠದ ‘ಯಕ್ಷಾರಾಧನಾ’ಕ್ಕೆ ಚಾಲನೆ

Update: 2020-03-07 22:04 IST

ಉಡುಪಿ, ಮಾ.7: ಭಗವಂತನ ಅನೇಕ ಅವತಾರಗಳು ಹಾಗೂ ಅವುಗಳ ಗುಣಗಳ ಕುರಿತು ಜನಸಾಮಾನ್ಯರಿಗೆ ತಿಳಿಸಲು ಶ್ರೀಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬರಾದ ಶ್ರೀನರಹರಿತೀರ್ಥರು ಈ ಯಕ್ಷಗಾನ ಕಲೆಯನ್ನು ನಮಗೆ ಪರಿಚಯಿಸಿದರು ಎಂದು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಹೇಳಿದ್ದಾರೆ.

ಪರ್ಯಾಯ ಅದಮಾರು ಮಠದ ವತಿಯಿಂದ ತಮ್ಮ ಗುರುಗಳಾದ ಶ್ರೀವಿಶ್ವಪ್ರಿಯ ತೀರ್ಥರ ಅನುಗ್ರಹ ಹಾಗೂ ಅನುಮತಿಯೊಂದಿಗೆ ಶ್ರೀಈಶಪ್ರಿಯ ತೀರ್ಥರು ಪ್ರಾರಂಭಿಸಿರುವ ಮಾಸಿಕ ಯಕ್ಷಗಾನ ಪ್ರದರ್ಶನಗಳ ‘ಯಕ್ಷಾರಾಧನಾ’ ಸರಣಿಯನ್ನು ಇಂದು ಸಂಜೆ ರಾಜಾಂಗಣದ ಶ್ರೀನರಹರಿ ತೀರ್ಥ ವೇದಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಧರ್ಮಪ್ರಸಾರದ ಮಾಧ್ಯಮವಾಗಿ ಜನಪ್ರಿಯವೆನಿಸಿದ ಯಕ್ಷಗಾನ ಕಲೆಗೂ ತಮ್ಮ ಮಠಕ್ಕೂ ಇರುವ ನಂಟನ್ನು ಪುನರುತ್ಥಾನಗೊಳಿಸುವ ಸಂಕಲ್ಪದಂತೆ ಈ ಸರಣಿ ಕಾರ್ಯಕ್ರಮವನ್ನು ಪ್ರಾಂಭಿಸಲಾಗಿದೆ ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಕಟೀಲಿನ ವಿದ್ವಾನ್ ಹರಿನಾರಾಯಣ ಅಸ್ರಣ್ಣ, ಉಡುಪಿಯ ಸಂಸದೆ ಶೋಭಾ ಕರಂದ್ಲಾಜೆ, ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಮಹಾಪ್ರಬಂಧಕ ಯೋಗೀಶ ಆಚಾರ್ಯ, ಯಕ್ಷಗಾನ ಕೇಂದ್ರದ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ, ಮಲ್ಪೆಯ ಉದ್ಯಮಿ ಸಾಧು ಸಾಲ್ಯಾನ್ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್ ಸ್ವಾಗತಿಸಿದರು. ವಿದ್ವಾಂಸರಾದ ಕುತ್ಪಾಡಿ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರ್ವಹಿಸಿ, ಪ್ರಸಿದ್ಧ ಯಕ್ಷಗಾನ ಕಲಾವಿದ ವಾಸುದೇವ ರಂಗಾಭಟ್ಟರು ವಂದಿಸಿದರು.

ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಸುಧನ್ವ ಹಾಗೂ ತಾಮ್ರಧ್ವಜ’ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News