ದಮ್ಮಾಮ್: ಐಎಫ್ಎಫ್ ಸದಸ್ಯರಿಂದ ಸ್ನೇಹ ಸಮ್ಮಿಲನ

Update: 2020-03-09 10:54 GMT

ದಮ್ಮಾಮ್ : ಇಂಡಿಯಾ ಫ್ರೆಟರ್ನಿಟಿ ಫೋರಮ್ ದಮ್ಮಾಮ್ ಕರ್ನಾಟಕ ರಾಜ್ಯ ಘಟಕ ತಮ್ಮ ಸದಸ್ಯರಿಗಾಗಿ 'ಸಮ್ಮಿಲನ' ಕಾರ್ಯಕ್ರಮ ಇತ್ತೀಚೆಗೆ ದಮ್ಮಾಮ್ ನಲ್ಲಿ ಆಯೋಜಿಸಿತ್ತು.

ದಫ್, ಲಗೋರಿ, ಸೈಕಲ್‌ ಚಕ್ರ ಉರುಳಿಸುವುದು, ಹಗ್ಗ ಎಳೆಯುವುದು, ಸಂಗೀತ ಕುರ್ಚಿ ಇವೆಲ್ಲಾ ಬಾಲ್ಯದ ನೆನಪು ಬಿಚ್ಚುವ ಆಟಗಳಾಗಿದ್ದು, ಸೌದಿ ಅರೇಬಿಯಾದಲ್ಲಿ ತಮ್ಮ‌ ನಿತ್ಯ ಜೀವನದ ಜಂಜಾಟದ ಮಧ್ಯೆ ಅನಿವಾಸಿ ಭಾರತೀಯರಿಗೆ ಬಾಲ್ಯದ ಸಿಹಿ-ಕಹಿ  ನೆನಪುಗಳನ್ನು ಮೆಲುಕು‌ ಹಾಕಲು ಬಾಲ್ಯ ಕಾಲದ ಈ ಆಟಗಳು ವಿಶೇಷವಾಗಿದ್ದವು.

ಹಿರಿಯರು-ಕಿರಿಯರೆನ್ನದೆ ಇಂಡಿಯಾ ಫ್ರಟೆರ್ನಿಟಿ ಫೋರಮ್ ಸದಸ್ಯರು ಈ ಆಟಗಳಲ್ಲಿ ಪಾಲ್ಗೊಂಡು ನಕ್ಕು ನಲಿದರು.

ಇಂಡಿಯಾ ಫ್ರೆಟರ್ನಿಟಿ ದಮ್ಮಾಮ್ ಕರ್ನಾಟಕ ಘಟಕದ ಅಧ್ಯಕ್ಷ ಎ.ಎಂ.ಆರೀಫ್ ಜೋಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು‌. ಕಾರ್ಯಕ್ರಮದಲ್ಲಿ ಸುಮಾರು ಮುನ್ನೂರರಷ್ಟು ಮಂದಿ ಪಾಲ್ಗೊಂಡಿದ್ದರು. ಸಭಾಂಗಣದಲ್ಲಿ  ವ್ಯವಸ್ಥೆಗೊಳಿಸಲಾಗಿದ್ದ ಕೌಂಟರ್ ಗಳು  ಕರಾವಳಿ ಕರ್ನಾಟಕದ ಆಹಾರ ಪದ್ಧತಿಯನ್ನು ಬಿಂಬಿಸುತ್ತಿದ್ದವು. ರುಚಿ ರುಚಿ ಮೀನು ಫ್ರೈ, ನೀರು ದೋಸೆ,  ಜಾತ್ರೆ- ಉತ್ಸವಗಳಲ್ಲಿ  ಸವಿಯ ಸಿಗುವ  ಆಮ್ಲೇಟ್, ಲಿಂಬೆ ಶರ್ಬತ್, ಬುರ್ಜಿ‌ ಮುಂತಾದ ಲಘು ಆಹಾರ ಪಾನೀಯಗಳನ್ನು ಈ ಕೌಂಟರ್ ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.  ಉಪ್ಪು ಮತ್ತು ಮೆಣಸಿನ ಹುಡಿಯ ಮಿಶ್ರಣವನ್ನು ಮೆದುವಾಗಿ ಸವರಿದ ಮುಳ್ಳು ಸೌತೆ (ಕುಕುಂಬರ್), ಪೈನ್ ಆಪಲ್ ಗಳು ನೆರೆದವರ ಬಾಯಿಯಲ್ಲಿ ನೀರೂರಿಸಿದ್ದವು.

ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಕಿರು ಪ್ರಹಸನ, ಸಂಗೀತ, ಹಾಡು ಹಾಗೂ ಇನ್ನೂ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಇಂಡಿಯಾ ಫ್ರಟೆರ್ನಿಟಿ ಫೋರಮ್ ದಮ್ಮಾಮ್, ಕರ್ನಾಟಕ ಕಾರ್ಯದರ್ಶಿ ರಫೀಕ್  ವಿಟ್ಲ, ಐಎಸ್ಎಫ್  ದಮ್ಮಾಮ್  ಕರ್ನಾಟಕ ರಾಜ್ಯಾಧ್ಯಕ್ಷ ಶರೀಫ್ ಜೋಕಟ್ಟೆ,  ಐಎಫ್ಎಫ್ ಜುಬೈಲ್ ಕರ್ನಾಟಕ ಅಧ್ಯಕ್ಷ ಅಥಾವುಲ್ಲಾ, ಕಾರ್ಯದರ್ಶಿ ಅಬೂ ಸಾಲಿಹ್, ಐಎಸ್ಎಫ್  ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಪುತ್ತೂರು, ಇಂಡಿಯಾ ಫ್ರಟೆರ್ನಿಟಿ ಫೋರಮ್ ಅಸೀರ್ ಪ್ರಾದೇಶಿಕ ಅಧ್ಯಕ್ಷ ಸಲೀಮ್ ಗುರುವಾಯನಕೆರೆ, ಐಎಫ್ಎಫ್ ಕರ್ನಾಟಕ ಅಬಹಾ ಪ್ರಧಾನ ಕಾರ್ಯದರ್ಶಿ ಹನೀಫ್ ಜೋಕಟ್ಟೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು‌.

ಸಾಜಿದ್ ವಳವೂರು ಮತ್ತು ಝೈನುದ್ದೀನ್ ಸಜೀಪ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News