×
Ad

ಕೊರೋನ ಭೀತಿ: ಈ ದೇಶದ ಕಾಲುಭಾಗದಷ್ಟು ಜನರಿಗೆ ದಿಗ್ಬಂಧನ

Update: 2020-03-08 21:16 IST
file photo

ಬೀಜಿಂಗ್,ಮಾ.8: ಇಟಲಿಯಾದ್ಯಂತ ಮಾರಣಾಂತಿಕ ಕೊರೋನ ವೈರಸ್ ಸೋಂಕು ಒಂದೇ ಸಮನೆ ವ್ಯಾಪಿಸುತ್ತಿದ್ದು, ಈ ಭೀಕರ ಸೋಂಕಿನಿಂದ ತತ್ತರಿಸಿರುವ ಲೊಂಬಾರ್ಡಿ ಪ್ರಾಂತಕ್ಕೆ ಸಂಪೂರ್ಣ ಬೀಗಮುದ್ರೆ ಜಡಿಯಲಾಗಿದೆ. ಸೋಂಕು ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆಯಾಗಿ ಇಟಲಿಯ ಇತರ ಪ್ರಾಂತಗಳ ಹಲವು ಪ್ರದೇಶಗಳಿಗೂ ಬಾಹ್ಯಸಂಪರ್ಕವನ್ನು ಕಡಿದು ಹಾಕಲಾಗಿದೆ.

  ಇಟಲಿಯ ಕಾಲುಭಾಗದಷ್ಟು ಜನಸಂಖ್ಯೆಗೆ ಈ ನಿರ್ಬಂಧ ಕ್ರಮಗಳು ಅನ್ವಯವಾಗಲಿದ್ದು, ಅವು ಎಪ್ರಿಲ್ 3ರವರೆಗೂ ಜಾರಿಯಲ್ಲಿರುವುದಾಗಿ ಮೂಲಗಳು ತಿಳಿಸಿವೆ.

  ಕೊರೋನಾ ಪೀಡಿತ ಲೊಂಬಾರ್ಡಿ ಪ್ರಾಂತ ಹಾಗೂ ಉತ್ತರ ಇಟಲಿಯ ಹಲವಾರು ಪ್ರದೇಶಗಳಲ್ಲಿ ಜನರ ಚಲನವಲಗಳಿಗೆ ಹೊಸ ನಿರ್ಬಂಧಗಳನ್ನು ವಿಧಿಸುವ ನೂತನ ಆಧ್ಯಾದೇಶಕ್ಕೆ ಇಟಲಿ ಪ್ರಧಾನಿ ಕೊಂಟೆ ಸಹಿಹಾಕಿದ್ದಾರೆ.

         ಯುರೋಪ್ ಒಕ್ಕೂಟದ ರಾಷ್ಟ್ರವಾದ ಇಟಲಿಯಲ್ಲಿ ಕಳೆದ 24 ತಾಸುಗಳಲ್ಲಿ 1247 ಮಂದಿಗೆ ಕೊರೋನ ವೈರಸ್ ಸೋಂಕು ತಗಲಿದೆ. ಇದರೊಂದಿಗೆ ಇಟಲಿಯಲ್ಲಿ ಸೋಂಕು ಪೀಡಿತರ ಸಂಖ್ಯೆ 5883ಕ್ಕೇರಿದೆ. ಅಲ್ಲದೆ ಕಳೆದ 24 ತಾಸುಗಳಲ್ಲಿ 36 ಮಂದಿ ವೈರಸ್‌ನಿಂದ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 233ಕ್ಕೇರಿದೆ.

    

ಕೊರೋನ ಹರಡುವ ಭೀತಿಯಿಂದಾಗಿ ಇಟಲಿಯ ಪ್ರಸಿದ್ಧ ನಗರವಾದ ವೆನಿಸ್‌ನಲ್ಲಿ ಕಾರ್ನಿವಲ್ ಉತ್ಸವವನ್ನು ರದ್ದುಪಡಿಸಲಾಗಿದೆ ಹಾಗೂ ಯುರೋಪ್‌ನಲ್ಲಿ ಕೊರೋನ ಹಾವಳಿಯ ಉಗಮಸ್ಥಾನವಾದ ಇಟಲಿಗೆ ಪ್ರಯಾಣಿಸದಂತೆ ಇತರ ದೇಶಗಳು ತಮ್ಮ ಪ್ರಜೆಗಳಿಗೆ ಎಚ್ಚರಿಕೆ ನೀಡಿವೆ. ಈ ಮಧ್ಯೆ ಕೊರೋನ ಪಿಡುಗು, ಇಟಲಿಯ ಆರ್ಥಿಕತೆಗೂ ಹೊಡೆತ ನೀಡಿದ್ದು, ದೇಶವೀಗ ತೀವ್ರವಾದ ಆರ್ಥಿಕ ಹಿಂಜರಿತವನ್ನು ಕಾಣುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News