ಮರಾಠಿ ಜನಾಂಗದಲ್ಲಿ ಗುರಿಕಾರರ ಪಾತ್ರ ಕುರಿತ ವಿಚಾರ ಸಂಕಿರಣ
ಉಡುಪಿ, ಮಾ.8: ಮರಾಠಿ ಜನಾಂಗದಲ್ಲಿ ಗುರಿಕಾರ ಪದ್ಧತಿ ಬಹಳ ಹಿಂದಿನಿಂದ ಇತ್ತು. ಗೋಂದೊಳು ಪೂಜೆ, ಹೋಲಿ, ಬೈರವ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಆಚರಣೆಗಳು ಹಾಗೂ ವಿವಾಹ ಸಂದರ್ಭಗಳಲ್ಲಿ ಗುರಿ ಕಾರರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿ ಈ ಸಮುದಾಯವನ್ನು ಮುನ್ನಡೆಸ ಬೇಕೆಂದು ಉಪನ್ಯಾಸಕ ಸಂಜೀವ ನಾಯ್ಕ ಹೇಳಿದ್ದಾರೆ.
ಹಿರಿಯಡ್ಕ ಅಂಜಾರಿನಲ್ಲಿ ಇತ್ತೀಚೆಗೆ ಜರಗಿದ ವಿಚಾರ ಸಂಕಿರಣದಲ್ಲಿ ಮರಾಠಿ ಜನಾಂಗದಲ್ಲಿ ಗುರಿಕಾರರ ಪಾತ್ರ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ರಾಜ್ಯ ಖಜಾನೆಯ ನಿವೃತ್ತ ನಿರ್ದೇಶಕ ಕೆ.ಕೆ.ನಾಯ್ಕ ಮಾತನಾಡಿ, ಗುರಿಕಾರರಿಗೆ ಈ ಸಮಾಜ ನೀಡಿದ ಮನ್ನಣೆಯನ್ನು ಉಳಿಸಿ ಕೊಂಡು ಬರಬೇಕು ಎಂದು ಅಭಿಪ್ರಾಯ ಪಟ್ಟರು.
ಬಿ.ಎಸ್.ಎನ್.ಎಲ್. ಇದರ ನಿವೃತ್ತ ಡಿ.ಜಿ.ಎಂ. ನರಸಿಂಹ ನಾಯ್ಕ ಅಮುಜಿ ಮಾತನಾಡಿದರು. ಈ ಸಂದರ್ಭದಲ್ಲಿ 18 ಜನ ಗುರಿಕಾರರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವೆಂಕಟೇಶ್ ವಹಿಸಿದ್ದರು. ರಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.