×
Ad

‘ಬೇಟಿ ಬಚಾವೊ, ಬೇಟಿ ಪಡಾವೊ' ನಿಧಿಯ ಬಹುಪಾಲನ್ನು ಜಾಹೀರಾತಿಗೆ ವೆಚ್ಚ ಮಾಡಿದ ಕೇಂದ್ರ ಸರಕಾರ

Update: 2020-03-08 21:25 IST

ಹೊಸದಿಲ್ಲಿ, ಮಾ. 8: ‘ಬೇಟಿ ಬಚಾವೊ, ಬೇಟಿ ಪಡಾವೊ’ ಯೋಜನೆ ನಿಧಿಯ ಬಹುಪಾಲನ್ನು ಯಾವುದೇ ರೀತಿಯ ಸುದೃಢ ಕ್ರಮ ಕೈಗೊಳ್ಳಲು ಬಳಸುವ ಬದಲು ಜಾಹೀರಾತಿಗೆ ವೆಚ್ಚ ಮಾಡಲಾಗಿದೆ ಎಂದು ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ ಒಪ್ಪಿಕೊಂಡಿದೆ.

2015ರಲ್ಲಿ ಯೋಜನೆ ಆರಂಭಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಹೆಣ್ಣು ಮಕ್ಕಳ ಸಬಲೀಕರಣ ಹಾಗೂ ಶಿಕ್ಷಣಕ್ಕೆ ಶ್ರಮಿಸುತ್ತಿರುವ ತನ್ನ ಸರಕಾರದ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದ್ದರು. ಆದರೆ 2016ರಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ರಾಜ್ಯಸಭೆಯಲ್ಲಿ ನೀಡಿದ ವೆಚ್ಚದ ಅಂಕಿ-ಅಂಶ ಹಾಗೂ ಪ್ರಧಾನಿ ಅವರ ಮಾತು ಒಂದಕ್ಕೊಂದು ಹೋಲಿಕೆ ಆಗುತ್ತಿಲ್ಲ.

'ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆಗೆ ಕಳೆದ ಮೂರು ವರ್ಷಗಳಲ್ಲಿ ಬಜೆಟ್ ಮಂಜೂರು ಹಾಗೂ ವೆಚ್ಚದ ಕುರಿತ ವಿವರ, 2020ರಲ್ಲಿ ಹಣ ಮಂಜೂರು ಮಾಡುವಲ್ಲಿ ಇಳಿಕೆಯಾಗಿದೆಯೇ? ಹಾಗೂ ಈ ಯೋಜನೆಯ ಪ್ರಚಾರಕ್ಕೆ ಖರ್ಚು ಮಾಡಲಾದ ನಿಧಿಯ ಪ್ರಮಾಣದ' ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದ ಮುಹಮ್ಮದ್ ನದೀಮುಲ್ ಹಕ್ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ ‘ಬೇಟಿ ಬಚಾವೊ, ಬೇಟಿ ಪಡಾವೊ’ ಯೋಜನೆ ಬಗ್ಗೆ  ಚಕಿತಗೊಳಿಸುವ ಅಂಕಿ-ಅಂಶಗಳನ್ನು ನೀಡಿದೆ.

ಈ ಅಂಕಿ ಅಂಶದ ಪ್ರಕಾರ 2016-17ರಲ್ಲಿ 43 ಕೋ. ರೂ. ಅನುದಾನ ಮಂಜೂರಾಗಿದ್ದು, 32.7 ಕೋಟಿ ರೂ. ಬಿಡುಗಡೆಯಾಗಿತ್ತು. ಅದರಲ್ಲಿ 29.79 ಕೋ. ರೂ.ವನ್ನು ಮಾಧ್ಯಮ ಚಟುವಟಿಕೆಗಳಿಗೆ ವೆಚ್ಚ ಮಾಡಲಾಗಿತ್ತು. 2017-18 200 ಕೋ. ರೂ. ಮಂಜೂರಾಗಿದ್ದು, 169.1 ಕೋ. ರೂ. ಬಿಡುಗಡೆಯಾಗಿತ್ತು. ಅದರಲ್ಲಿ 135.7 ಕೋ. ರೂ.ವನ್ನು ಮಾಧ್ಯಮ ಚಟುವಟಿಕೆಗಳಿಗೆ ವೆಚ್ಚ ಮಾಡಲಾಗಿತ್ತು. 2019-20ರಲ್ಲಿ 280 ಕೋ. ರೂ. ಮಂಜೂರಾಗಿದ್ದು, 244.92 ಕೋ. ರೂ. ಬಿಡುಗಡೆಯಾಗಿತ್ತು. ಅದರಲ್ಲಿ 160.13 ಕೋ. ರೂ. ಮಾಧ್ಯಮ ಚಟುವಟಿಕೆಗಳಿಗೆ ವೆಚ್ಚ ಮಾಡಲಾಗಿತ್ತು.

ಲಿಂಗ ಬೇಧ ಇರುವ ಜಿಲ್ಲೆಗಳು ಹಾಗೂ ನಗರಗಳನ್ನು ಕೇಂದ್ರೀಕರಿಸಿದ ಹಾಗೂ ಹಿಂದುಳಿದ ವಲಯಗಳಲ್ಲಿ ಮಕ್ಕಳ ಲಿಂಗಾನುಪಾತವನ್ನು ಸುಧಾರಿಸುವ ಪ್ರಮುಖ ಯೋಜನೆಗಳಲ್ಲಿ ಒಂದಾದ ‘ಬೇಟಿ ಬಚಾವೊ, ಬೇಟಿ ಪಡಾವೊ’ ಯೋಜನೆಯಲ್ಲಿ ಸಾಮಾಜಿಕ ಕ್ರೋಢೀಕರಣ ಹಾಗೂ ಸಂವಹನ ಅಭಿಯಾನಕ್ಕೆ ಆದ್ಯತೆ ನೀಡಲಾಗಿತ್ತು. ಆದರೆ, ಸರಕಾರ ನಿಧಿಯನ್ನು ಯೋಜನೆಯ ಕಾರ್ಯಗಳಿಗೆ ಬದಲಾಗಿ ಜಾಹೀರಾತುಗಳಿಗೆ ವೆಚ್ಚ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News