ಮಂಗಳೂರು ಹಿಂಸಾಚಾರದಲ್ಲಿ 78 ಪೊಲೀಸರಿಗೆ ಗಾಯ : ಡಿಸಿಪಿ ಅರುಣಾಂಶುಗಿರಿ
ಮಂಗಳೂರು: ನಗರದಲ್ಲಿ 2019ರ ಡಿ.19ರಂದು ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು 78 ಪೊಲೀಸರಿಗೆ ಗಾಯಗಳಾಗಿದ್ದವು ಎಂದು ಮಂಗಳೂರು ಕಮಿಷನರೇಟ್‌ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶುಗಿರಿ ಮ್ಯಾಜಿಸ್ಟೀರಿಯಲ್ ವಿಚಾರಣೆಯಲ್ಲಿ ಹೇಳಿಕೆ ದಾಖಲಿಸಿದ್ದಾರೆ.
ನಗರದ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ ವಿಚಾರಣೆಯಲ್ಲಿ ಹಾಜರಾದ ಡಿಸಿಪಿ ಅರುಣಾಂಶುಗಿರಿ ವಿಚಾರಣಾಧಿಕಾರಿ ಆಗಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಲಿಖಿತ ಹೇಳಿಕೆ ಮತ್ತು ದಾಖಲೆಗಳನ್ನು ನೀಡಿದ್ದು, ಒಟ್ಟು 38 ದಾಖಲೆಗಳನ್ನು ಸಲ್ಲಿಸಿದ್ದಾರೆ.
ಘಟನೆ ನಡೆದ ದಿನ ಪೊಲೀಸ್ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದೆ. ಅನುಮತಿ ಇಲ್ಲದೆ ಪ್ರತಿಭಟನೆಗೆ ಯತ್ನಿಸಿದವರನ್ನು ನಿಯಂತ್ರಿಸಲು ಮುಂದಾದೆವು. ಪ್ರತಿಭಟನೆಗೆ ಸೇರಿದ್ದ ಜನರು ಗಲಭೆಗೆ ಇಳಿದರು. ಮಾರಕಾಸ್ತ್ರಗಳೊಂದಿಗೆ ಪೊಲೀಸರ ಮೇಲೆಯೇ ದಾಳಿ ನಡೆಸಲು ಯತ್ನಿಸಿದರು. ಈ ವೇಳೆ 78 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಅನಿವಾರ್ಯವಾಗಿ ಗುಂಡು ಹಾರಿಸಲಾಯಿತು ಎಂದು ಡಿಸಿಪಿ ಅರುಣಾಂಶುಗಿರಿ ಹೇಳಿಕೆಯಲ್ಲಿ ದಾಖಲೆಗಳನ್ನು ನೀಡಿದ್ದಾರೆ.
ಜಿಲ್ಲಾ ಖಾಝಿ ಹೇಳಿಕೆ ದಾಖಲು: ಮ್ಯಾಜಿಸ್ಟೀರಿಯಲ್ ವಿಚಾರಣಾಧಿಕಾರಿ ಎದುರು ಹಾಜರಾದ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಘಟನೆಗೆ ಸಂಬಂಧಿಸಿದಂತೆ ಲಿಖಿತ ಹೇಳಿಕೆ ಸಲ್ಲಿಸಿದರು.
ಸಿಎಎ ವಿರೋಧಿಸಿ ಎಸ್ಕೆಎಸ್ಸೆಸ್ಸೆಫ್‌ನಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಪೊಲೀಸರು ಅನುಮತಿ ನಿರಾಕರಿಸಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಗಿತ್ತು. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ಹಂಚಿಕೊಂಡಿದ್ದೆವು. ಡಿ.19ರ ಗಲಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ’ ಎಂದು ಜಿಲ್ಲಾ ಖಾಝಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.
ಗೋಲಿಬಾರ್ ನಂತರ ಹಲವು ಮಂದಿ ಕೊಲೆಬೆದರಿಕೆ ಹಾಕಿದ್ದಾರೆ. ನನ್ನ ಕೊಲೆಗೂ ಹಲವು ಬಾರಿ ಯತ್ನಿಸಿದ ನಿದರ್ಶನಗಳಿವೆ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವುದಾಗಿ ಖಾಝಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆಯಲ್ಲಿ ಒಟ್ಟು 30 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಾಗಿದ್ದರು. ಮಾ.12ರಂದು ಮತ್ತೆ ವಿಚಾರಣೆ ನಡೆಯಲಿದ್ದು, ಆ ದಿನ ಪೊಲೀಸ್ ಕಮಿಷನರ್ ಸೇರಿದಂತೆ ಹಲವರು ವಿಚಾರಣೆಗೆ ಹಾಜರಾಗಲಿದ್ದಾರೆ.
- ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ, ಗೋಲಿಬಾರ್ ಪ್ರಕರಣ ವಿಚಾರಣಾಧಿಕಾರಿ