ದಿಲ್ಲಿ ಹಿಂಸಾಚಾರ: ತಾಹಿರ್ ಹುಸೇನ್ ಸಹೋದರನ ಬಂಧನ

Update: 2020-03-09 12:56 GMT

ಹೊಸದಿಲ್ಲಿ, ಮಾ.9: ಪೌರತ್ವ ಕಾಯ್ದೆಯನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರ ಸಂದರ್ಭ ಗುಪ್ತಚರ ಇಲಾಖೆಯ ಅಧಿಕಾರಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಚ್ಛಾಟಿತ ‘ಆಪ್’ ಕೌನ್ಸಿಲರ್ ತಾಹಿರ್ ಹುಸೈನ್ ಸಹೋದರ ಶಾ ಆಲಂನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ್ ಶರ್ಮರ ಮೃತದೇಹ ಫೆಬ್ರವರಿ 26ರಂದು ಚಾಂದ್‌ಬಾಗ್ ಪ್ರದೇಶದ ಚರಂಡಿಯಲ್ಲಿ ಪತ್ತೆಯಾಗಿತ್ತು. ಶರ್ಮರನ್ನು ಕೊಲೆ ಮಾಡಿದ ಸಂದರ್ಭ ಶಾ ಆಲಂ ಅದೇ ಸ್ಥಳದಲ್ಲಿದ್ದ ಎಂಬ ಪುರಾವೆ ಸಂಗ್ರಹಿಸಿದ್ದ ಕ್ರೈಂಬ್ರಾಂಚ್ ಪೊಲೀಸರು ಆಲಂನನ್ನು ಬಂಧಿಸಿದ್ದಾರೆ.

ತಮ್ಮ ಪುತ್ರನ ಹತ್ಯೆ ಪ್ರಕರಣದಲ್ಲಿ ತಾಹಿರ್ ಹುಸೈನ್ ಕೈವಾಡವಿದೆ ಎಂದು ಅಂಕಿತ್ ಶರ್ಮರ ತಂದೆ ದೂರು ನೀಡಿದ್ದರು. ದೂರು ದಾಖಲಾದ ತಕ್ಷಣ ತಾಹಿರ್ ಹುಸೇನ್ ತಲೆಮರೆಸಿಕೊಂಡಿದ್ದ. ಈತನನ್ನು ಕಳೆದ ಗುರುವಾರ ಬಂಧಿಸಿ 7 ದಿನಗಳ ಕಸ್ಟಡಿ ವಿಧಿಸಲಾಗಿದೆ. ಹಿಂಸಾಚಾರ ಸಂದರ್ಭ ಚಾಂದ್‌ಬಾಗ್ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದ ಕೆಲವು ಮಹಿಳೆಯರನ್ನು ಅಂಕಿತ್ ಶರ್ಮ ರಕ್ಷಿಸುವ ಪ್ರಯತ್ನ ನಡೆಸಿದ್ದರು ಮತ್ತು ಶರ್ಮರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಸಂದರ್ಭ ಹುಸೇನ್ ಅದೇ ಪ್ರದೇಶದಲ್ಲಿ ಇದ್ದ ಎಂಬುದು ಇದುವರೆಗಿನ ವಿಚಾರಣೆಯ ಸಂದರ್ಭ ಬೆಳಕಿಗೆ ಬಂದಿದೆ . ಹಿಂಸಾಚಾರ ಸಂದರ್ಭ ತಾಹಿರ್ ಹುಸೇನ್ ಬಳಿ ಪಿಸ್ತೂಲ್ ಇತ್ತು ಮತ್ತು ಇದನ್ನು ಶಾ ಆಲಂ ಬಳಸಿರುವುದಕ್ಕೆ ಸಾಕ್ಷಿಗಳು ಲಭಿಸಿವೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News