ದಿಲ್ಲಿ ಹಿಂಸಾಚಾರ: ಸೋನಿಯಾ ಗಾಂಧಿಗೆ ವರದಿ ಸಲ್ಲಿಸಿದ ಕಾಂಗ್ರೆಸ್ ತಂಡ

Update: 2020-03-09 12:55 GMT

ಹೊಸದಿಲ್ಲಿ, ಮಾ.9: ದಿಲ್ಲಿ ಹಿಂಸಾಚಾರದ ಬಗ್ಗೆ ಐವರು ಕಾಂಗ್ರೆಸ್ ಸದಸ್ಯರ ಸತ್ಯಶೋಧನಾ ತಂಡವು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಗೆ ಸೋಮವಾರ ವರದಿ ಸಲ್ಲಿಸಿದ್ದು, ಪೊಲೀಸರ ಸಮ್ಮುಖದಲ್ಲೇ ಕೆಲವು ಬಿಜೆಪಿ ಮುಖಂಡರು ಮಾಡಿದ್ದ ಪ್ರಚೋದಕ ಭಾಷಣ ಹಿಂಸಾಚಾರ ಭುಗಿಲೇಳಲು ಪ್ರಧಾನ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ. ಹಿರಿಯ ಕಾಂಗ್ರೆಸ್ ಮುಖಂಡರಾದ ಮುಕುಲ್ ವಾಸ್ನಿಕ್, ಕುಮಾರಿ ಸೆಲ್ಜಾ, ತಾರಿಖ್ ಅನ್ವರ್, ಶಕ್ತಿಸಿನ್ಹ ಗೋಹಿಲ್ ಮತ್ತು ಸುಷ್ಮಿತಾ ದೇವ್‌ರನ್ನು ಒಳಗೊಂಡಿದ್ದ ತಂಡವನ್ನು ಫೆ.28ರಂದು ರಚಿಸಿದ್ದ ಸೋನಿಯಾ , ದಿಲ್ಲಿಯಲ್ಲಿ ಹಿಂಸಾಚಾರದಿಂದ ತತ್ತರಿಸಿದ್ದ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಒಪ್ಪಿಸುವಂತೆ ಸೂಚಿಸಿದ್ದರು. ಹಿಂಸಾಚಾರದಿಂದ ಕಂಗೆಟ್ಟಿದ್ದ ಜನರಲ್ಲಿ ವಿಶ್ವಾಸವನ್ನು ತುಂಬಲು ದಿಲ್ಲಿ ಸರಕಾರ ಹಾಗೂ ಕೇಂದ್ರ ಸರಕಾರಗಳೆರಡೂ ವಿಫಲವಾಗಿವೆ. ಆತಂಕಿತರಾಗಿದ್ದ ಜನರ ಅಹವಾಲುಗಳನ್ನು ಆಲಿಸುವಲ್ಲಿಯೂ ಸರಕಾರಗಳು ಕ್ರಮ ಕೈಗೊಂಡಿಲ್ಲ. ಗಲಭೆ ನಿಯಂತ್ರಿಸುವಲ್ಲಿ ದಿಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಿಳಿಸಿದೆ.

ಹಿಂಸಾಚಾರದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಹಾಗೂ ಮನೆ, ಅಂಗಡಿಗಳನ್ನು ಕಳೆದುಕೊಂಡು ಕಂಗಾಲಾಗಿರುವ ಜನರನ್ನು ಸಮಿತಿಯ ಸದಸ್ಯರು ಭೇಟಿಯಾಗಿದ್ದಾರೆ. ಅಲ್ಲದೆ ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್ ಸಿಬಂದಿ ಮತ್ತು ಗುಪ್ತಚರ ವಿಭಾಗದ ಸಿಬಂದಿಯ ಮನೆಗೂ ಭೇಟಿ ನೀಡಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News