ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಮಣಿಪಾಲ ಶಾಖೆ ಉದ್ಘಾಟನೆ
ಮಣಿಪಾಲ, ಮಾ.9: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಎದುರಿನ ಮಣಿಪಾಲ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಆರಂಭಿಸಲಾದ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 10ನೆ ನೂತನ ಹವಾನಿಯಂತ್ರಿತ ಮಣಿಪಾಲ ಶಾಖೆಯನ್ನು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೋಮವಾರ ಉದ್ಘಾಟಿಸಿದರು.
ಸಾಮಾಜಿಕ ಬದುಕಿನಲ್ಲಿ ಆರ್ಥಿಕ ವ್ಯವಸ್ಥೆಯ ಸ್ಥಾನ ಅತಿ ಪ್ರಾಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಬಡಗಬೆಟ್ಟು ಸೊಸೈಟಿ ನಿರಂತರ ವಾಗಿ ಶ್ರೇಯಸ್ಸಿನ ಕಡೆಗೆ ಮುನ್ನಡೆಯಬೇಕು. ಸಮಾಜದೊಂದಿಗೆ ಸಂಸ್ಥೆ ಕೂಡ ಬೆಳೆಯಬೇಕು. ಸಂಸ್ಥೆಯ ಮೂಲಕ ಸಮಾಜ ಬೆಳೆಯಬೇಕು. ಈ ರೀತಿಯ ಪರಸ್ಪರ ಕೊಡು ಕೊಳ್ಳುವಿಕೆಯೊಂದಿಗೆ ಸಮಾಜ ಹಾಗೂ ಸಂಸ್ಥೆ ಪ್ರಗತಿ ಸಾಧಿಸಬೇಕು ಎಂದು ಪೇಜಾವರ ಸ್ವಾಮೀಜಿ ಹಾರೈಸಿದರು.
ಸೊಸೈಟಿಯ ಸ್ಮರಣ ಸಂಚಿಕೆ ‘ಶತಸ್ಮತಿ’ಯನ್ನು ಬಿಡುಗಡೆಗೊಳಿಸಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ. ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಆಡಳಿತ ಮಂಡಳಿಯ ಪರಿಶ್ರಮ ದೊಂದಿಗೆ ಸಿಬ್ಬಂದಿಗಳಲ್ಲಿ ಸೇವಾ ಮನೋಭಾವ ಇದ್ದರೆ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯವಾಗುತ್ತದೆ. ಇಂದು ಸಹಕಾರಿ ಕ್ಷೇತ್ರವು ಬಲಿಷ್ಠವಾಗಿ ಬೆಳೆ ಯುತ್ತಿದೆ. ಇಡೀ ದೇಶದಲ್ಲಿ ಕೃಷಿ ಸಾಲದಲ್ಲಿ ಶೇ.100ರಷ್ಟು ಮರುಪಾವತಿ ಆಗುತ್ತಿರುವ ಏಕೈಕ ಜಿಲ್ಲೆ ನಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಣಿಪಾಲ ಟಿ.ಎಂ.ಎ.ಪೈ ಫೌಂಡೇಶನ್ ಕಾರ್ಯದರ್ಶಿ ಟಿ.ಅಶೋಕ್ ಪೈ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಹೆಯ ಸಹಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಬ್ಯಾಂಕ್ ಆಫ್ ಬರೋಡಾ ಉಡುಪಿ ಪ್ರಾದೇಶಿಕ ಪ್ರಬಂಧಕ ರವೀಂದ್ರ ರೈ, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕಿ ಚಂದ್ರಪ್ರತಿಮ ಮುಖ್ಯ ಅತಿಥಿಗಳಾಗಿದ್ದರು.
ಲೆಕ್ಕಪರಿಶೋಧಕ ಶ್ರೀರಾಮುಲು ನಾಯ್ಡು, ಸೊಸೈಟಿಯ ಉಪಾಧ್ಯಕ್ಷ ಎಲ್. ಉಮಾನಾಥ್, ಶತಮಾನೋತ್ಸವ ಸಮಿತಿಯ ಸಂಚಾಲಕ ಪುರುಷೋತ್ತಮ ಪಿ. ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು. ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು.
ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ್ ವಂದಿಸಿದರು. ಸತೀಶ್‌ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.