×
Ad

ಕೋಡಿಯಲ್ಲಿ ಮಾದಕ ವ್ಯಸನ ಮುಕ್ತ ಸಮಾಜ, ಸಾಕ್ಷರತಾ ಅಭಿಯಾನಕ್ಕೆ ಚಾಲನೆ

Update: 2020-03-09 19:48 IST

ಕುಂದಾಪುರ, ಮಾ.9: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಹಾಗೂ ಸಂಪೂರ್ಣ ಸಾಕ್ಷರತಾ ಅಭಿಯಾನಕ್ಕೆ ಇಂದು ಕೋಡಿಯ ಶ್ರೀಕ್ಷೇತ್ರ ಚಕ್ರೇಶ್ವರಿಯಲ್ಲಿ ಚಾಲನೆ ನೀಡಲಾಯಿತು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ದೋಮ ಚಂದ್ರಶೇಖರ್ ಮಾತನಾಡಿ, ಮಾದಕ ವ್ಯಸನದಿಂದ ಮುಕ್ತ ಕೋಡಿ ನಿರ್ಮಾಣ ಆಗುವುದರೊಂದಿಗೆ ಬ್ಯಾರೀಸ್‌ನ ಶಿಕ್ಷಣದ ಫಲ ಸರ್ವರಿಗೂ ತಲುಪುವುದರ ಮೂಲಕ ಯಶಸ್ಸನ್ನು ಕಾಣಬೇಕಾಗಿದ್ದು, ಇದುವೇ ಈ ಅಭಿಯಾನದ ಗುರಿ ಯಾಗಿದೆ ಎಂದು ಹೇಳಿದರು.

ಕುಂದಾಪುರ ಪುರಸಭಾ ಸದಸ್ಯೆ ಲಕ್ಷ್ಮೀಬಾಯಿ, ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಾಣ ಹಾಗೂ ಜನಜಾಗೃತಿ ಆಂದೋಲನದ ಸ್ಟಿಕ್ಕರ್ ಬಿಡುಗಡೆಗೊಳಿಸಿ ದರು. ಶ್ರೀಕ್ಷೇತ್ರ ಚಕ್ರೇಶ್ವರಿಯ ಟ್ರಸ್ಟಿ ಸಂಜೀವ ಪೂಜಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರ ಮನವಿ ಪತ್ರ ಅನಾವರಣಗೊಳಿಸಿದರು. ಅಭಿಯಾನದ ಕರಪತ್ರವನ್ನು ಕೋಡಿಯ ಹಿರಿಯ ನಾಗರಿಕ ಹುಸೈನರ್ ಬಿಡುಗಡೆಗೊಳಿಸಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ದಿ.ಹಾಜಿ ಮಾಸ್ಟರ್ ಮೆಹಮುದ್ ಹಾಗೂ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ದುಡಿದ ದಿ.ಮಾಧವ ಪೂಜಾರಿ ಇವರಿಗೆ ಶ್ರದ್ಧಾಂಜಲಿಯ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಲಹೆಗಾರ ರಾದ ಹಾಜಿ ಅಬುಷೇಕ್, ಶಂಕರ ಪೂಜಾರಿ, ತಿಮ್ಮಪ್ಪಖಾರ್ವಿ, ನಾಗರಾಜ ಕಾಂಚನ್, ಪ್ರಕಾಶ್, ಪುರಸಭಾ ಮಾಜಿ ಸದಸ್ಯ ಪ್ರಭಾಕರ ಸೇರ್ವೆಗಾರ್ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್ ವಹಿಸಿದ್ದರು. ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಬ್ಯಾರೀಸ್ ಕನ್ನಡ ಅನುದಾನಿತ ಪ್ರೌಢ ಶಾಲಾ ಸಹಶಿಕ್ಷಕ ಜಯಶೀಲ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News