×
Ad

ಜಗತ್ತಿನಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನ: ಎ.ಕಲ್ಲೋಳಿಕರ್

Update: 2020-03-09 20:18 IST

ಉಡುಪಿ, ಮಾ.9: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಗೌರವಾದರಗಳನ್ನು ಬಹಳ ಹಿಂದಿನ ಕಾಲದಿಂದಲೂ ನೀಡುತ್ತಾ ಬರಲಾಗಿದೆ. ಆದರೆ ಕೆಲವೊಂದು ಸನ್ನಿವೇಶಗಳಲ್ಲಿ ಮಹಿಳೆಯನ್ನು ಅಬಲೆ ಎಂದು ಬಿಂಬಿಸಿ ದೌರ್ಜನ್ಯವೆಸಗುವ ಚಟುವಟಿಕೆಗಳು ಕೂಡ ಬೆಳೆದು ಬಂದಿದೆ. ಆದರೆ ಆಧುನಿಕ ಜಗತ್ತಿನಲ್ಲಿ ಮಹಿಳೆ ಪುರುಷರಿಗೆ ಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಭಾವಂತೆ ಯಾಗಿ ಸಾಧಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಉಡುಪಿ ನಗರಸಭೆ ಪೌರಾಯುಕ್ತ ಆನಂದ್ ಸಿ. ಕಲ್ಲೋಳಿಕರ್ ಹೇಳಿದ್ದಾರೆ.

ಬ್ರಹ್ಮಗಿರಿಯಲ್ಲಿರುವ ಲಯನ್ಸ್ ಭವನದಲ್ಲಿ ಉಡುಪಿ ನಗರಸಭೆಯ ನಲ್ಮ್ ಯೋಜನೆ ಮತ್ತು ಪ್ರಧಾನಮಂತ್ರಿ ಅವಾಜ್ ಯೋಜನೆಯಡಿಯಲ್ಲಿ ಮಹಿಳಾ ಸಬಲೀಕರಣ ಮತ್ತು ದೇಶದ ಉನ್ನತೀಕರಣ ಎನ್ನುವ ಪರಿಕಲ್ಪನೆಯಡಿಯಲ್ಲಿ ಶನಿವಾರ ನಡೆದ ನಗರವ್ಯಾಪ್ತಿಯ ಸ್ವಸಹಾಯ ಗುಂಪು ಗಳ ಮಹಿಳಾ ದಿನಾಚರಣ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ನಗರಸಭೆಯ ವತಿಯಿಂದ ಮಹಿಳಾ ಸಬಲೀಕರಣದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವುಗಳ ಪ್ರಯೋಜನವನ್ನು ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆದು ಕೊಳ್ಳಬಹುದು. ಹಾಗೆಯೆ ಈಗಾಗಲೇ ಸಾಕಷ್ಟು ಸಂಘಟಿತವಾಗಿರುವ ಸ್ವಸಹಾಯ ಸಂಘ ಗಳ ಅವಶ್ಯಕ ನೆರವನ್ನೂ ಕೂಡ ಮಹಿಳೆಯರು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯ ಸಹಾಯಕ ಸಾಂಖಿಕ ಅಧಿಕಾರಿ ದಿವ್ಯಶ್ರೀ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳಾ ಸಬಲೀಕರಣದ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ನಯನ ಭಂಡಾರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ್ ಸ್ವಾಗತಿಸಿ, ಪ್ರಕಾಶಿನಿ ಕುಮಾರಿ ವಂದಿಸಿದರು. ಮಿಷನ್ ಮ್ಯಾನೇಜರ್ ರಾವುಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News