×
Ad

ಟೆಂಡರ್ ಮೂಲಕ ಕುಡಿಯುವ ನೀರು ಪೂರೈಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2020-03-09 21:09 IST

ಮಂಗಳೂರು, ಮಾ.9: ಬೇಸಿಗೆಯಲ್ಲಿ ಕುಡಿಯವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಜಿಲ್ಲೆಯ ಪ್ರತಿ ಗ್ರಾಮಗಳನ್ನು ಗಮನಿಸಿ ಕುಡಿಯುವ ನೀರಿನ ಪೂರೈಕೆಯನ್ನು ಸಕಾಲಕ್ಕೆ ಮಾಡಬೇಕು.ಅದಕ್ಕಾಗಿ ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಸಬೇಕು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ತಹಶೀಲ್ದಾರ್‌ಗಳಿಂದ ಮಾಹಿತಿ ಪಡೆದ ಅವರು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಟೆಂಡರ್ ಕರೆಯಬೇಕು. ಯಾವುದೇ ಕಾರಣಕ್ಕೂ ಟೆಂಡರ್ ಕರೆಯದೆ ಪ್ರಕ್ರಿಯೆ ನಡೆಸಬಾರದು. ಜಿಪಿಎಸ್ ಅಳವಡಿಸಿದ ಟ್ಯಾಂಕರ್‌ಗಳನ್ನೇ ಬಳಸಿಕೊಳ್ಳಬೇಕು ಎಂದರು.

ಬಿಸಿಲಿನ ಶಾಖದಿಂದ ಜನರು ಮತ್ತು ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜಾನುವಾರುಗಳಿಗೆ ಮೇವು ಮತ್ತು ಶೆಡ್‌ಗಳ ನಿರ್ಮಾಣ ಮಾಡಬೇಕು ಎಂದು ಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ತೀವ್ರ ಉಷ್ಣಾಂಶ ಹೆಚ್ಚಳ ಹಾಗೂ ಬಿಸಿಗಾಳಿಯ ಹಿನ್ನಲೆಯಲ್ಲಿ ತುರ್ತು ಸಂದರ್ಭ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು. ಇಂತಹ ಸಂದರ್ಭ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಡಬೇಕು. ಅಲ್ಲದೆ ಇಂತಹ ಸಂದರ್ಭ ಸಂಬಂಧಪಟ್ಟ ಇಲಾಖೆಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗ ಸೂಚಿಯಲ್ಲಿ ತಿಳಿಸಿರುವ ಮಾನದಂಡ ಗಳನ್ನು ಅನುಸರಿಸಬೇಕು ಮತ್ತು ಅಂತಹ ಪ್ರದೇಶಗಳ ಮೇಲೆ ನಿಗಾವಹಿಸಬೇಕು ಎಂದು ಸಿಂಧೂ ರೂಪೇಶ್ ಕರೆ ನೀಡಿದರು.

ಸಭೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್, ತಹಶೀಲ್ದಾರ್ಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News