×
Ad

ಉದ್ಯಾವರ: ಕೈಗಾರಿಕಾ ವಲಯ ಭೂಪರಿವರ್ತನೆಗೆ ಎನ್‌ಒಸಿ; ಉಡುಪಿ ಜಿಪಂ ಅಧ್ಯಕ್ಷರ ಕ್ರಮ ವಿರೋಧಿಸಿ ಪ್ರತಿಭಟನೆ

Update: 2020-03-09 21:32 IST

 ಉಡುಪಿ, ಮಾ.9: ಉದ್ಯಾವರ ಗ್ರಾಪಂ ವ್ಯಾಪ್ತಿಯಲ್ಲಿ ಪರಿಸರ ಮಾರಕ ಕೈಗಾರಿಕೆಗಳನ್ನು ಸ್ಥಾಪಿಸಲು ಕೈಗಾರಿಕಾ ವಲಯ ಭೂಪರಿವರ್ತನೆಗೆ ನಿರಾ ಪೇಕ್ಷಣಾ ಪತ್ರವನ್ನು ನೀಡಿದ ಉಡುಪಿ ಜಿಪಂ ಅಧ್ಯಕ್ಷರ ಸರ್ವಾಧಿಕಾರಿ ಮತ್ತು ಜನವಿರೋಧಿ ನಿಲುವನ್ನು ವಿರೋಧಿಸಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಉದ್ಯಾವರ ಗ್ರಾಪಂ ಕಚೇರಿ ಎದುರು ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉದ್ಯಾವರದಲ್ಲಿ ಮೀನು ಉತ್ಪನ್ನ ಕೈಗಾರಿಕಾ ಘಟಕವು ಮಾಡುತ್ತಿರುವ ಹಾನಿಯಿಂದಾಗಿ ಉದ್ಯಾವರ ಗ್ರಾಪಂ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ಕೈಗಾರಿಕೆಗೆ ಕೈಗಾರಿಕಾ ವಲಯ ಭೂ ಪರಿವರ್ತನೆಗೆ ನಿರಾಪೇಕ್ಷಣಾ ಪತ್ರ ನೀಡ ಬಾರದು ಎಂದು ನಿರ್ಣಯ ಮಾಡಲಾಗಿತ್ತು ಮತ್ತು ಗ್ರಾಮಸಭೆಗಳಲ್ಲೂ ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಗಿತ್ತು ಎಂದರು.

ಆದರೆ ಇದೀಗ ಉಡುಪಿ ಜಿಪಂ ಅಧ್ಯಕ್ಷರು ಕೈಗಾರಿಕಾ ವಲಯ ಭೂಪರಿ ವರ್ತನೆಗೆ ನಿರಾಪೇಕ್ಷಣಾ ಪತ್ರವನ್ನು ನೀಡಿರುವುದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಜಿಪಂ ಅಧ್ಯಕ್ಷರು ಗ್ರಾಮದ ಜನರ ಭಾವನೆಗಳಿಗೆ ಬೆಲೆ ಕೊಟ್ಟು ನೀಡಿರುವ ನಿರಾಪೇಕ್ಷಣಾ ಪತ್ರವನ್ನು ಹಿಂಪಡೆಯಬೇಕು ಇಲ್ಲವಾ ದಲ್ಲಿ ತೀವ್ರ ಹೋರಾಟ ನಡೆಸಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.

ಹಿರಿಯ ಸಾಮಾಜಿಕ ಕಾರ್ಯಕ್ರರ್ತ ಭಾಸ್ಕರ್ ಪ್ರಸಾದ್, ನ್ಯಾಯವಾದಿ, ಕೆಪಿಸಿಸಿ ವಕ್ತಾರ ಸುಧೀರ್ ಮರೋಳಿ ಮಾತನಾಡಿದರು. ಈ ಸಂದರ್ಭದಲ್ಲಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಕೆಪಿಸಿಸಿ ಸದಸ್ಯ ಎಂ.ಎ.ಗಫೂರ್, ಕಾಂಗ್ರೆಸ್ ನಾಯಕರಾದ ಹರೀಶ್ ಕಿಣಿ, ನವೀನ್ ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ, ಆನಂದ್, ಲಾರೆನ್ಸ್ ಡೆಸಾ ಮೊದ ಲಾದವರು ಉಪಸ್ಥಿತರಿದ್ದರು.

ಜಿಪಂ ಅಧ್ಯಕ್ಷರ ಸ್ಪಷ್ಟನೆ

‘ಈ ಹಿಂದೆ ಫಿಶ್‌ಮಿಲ್ ಹೋರಾಟದಲ್ಲಿ ನಾನೂ ಕೂಡ ಭಾಗಿಯಾಗಿದ್ದೆ. ಪ್ರಸ್ತುತ ಫಿಶ್‌ಮಿಲ್ಗೆ ಪರವಾನಿಗೆ ನೀಡಿಲ್ಲ. ಕೆಲವೊಂದು ವರ್ಗದವರ ಬೇಡಿಕೆಗೆ ಸ್ಪಂದಿಸಿ ಫಿಶ್‌ಮಿಲ್ ಹೊರತುಪಡಿಸಿ ಕೈಗಾರಿಕಾ ವಲಯಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಈ ಭಾಗದಲ್ಲಿ ಫಿಶ್‌ಮಿಲ್ ಆರಂಭಕ್ಕೆ ನನ್ನ ವಿರೋಧ ವಿದೆ. ನಾನು ಇರುವವರೆಗೂ ಫಿಶ್‌ಮಿಲ್ ಆರಂಭಕ್ಕೆ ಅವಕಾಶ ನೀಡುವುದಿಲ್ಲ.’ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News