×
Ad

ಕೊರೋನ ವೈರಸ್ ಹಿನ್ನೆಲೆ: ಪ್ರಾಥಮಿಕ, ಪ್ರೌಢಶಾಲೆಗಳ ಪರೀಕ್ಷೆ ವೇಳಾಪಟ್ಟಿ ಬದಲಾವಣೆ

Update: 2020-03-09 21:39 IST

1ರಿಂದ 5ನೆ ತರಗತಿ ವಿದ್ಯಾರ್ಥಿಗಳಿಗೆ ಮಾ.16ರೊಳಗೆ ಮತ್ತು 6ರಿಂದ 9ನೆ ತರಗತಿಯ ವಿದ್ಯಾರ್ಥಿಗಳಿಗೆ ಮಾ.23ರೊಳಗೆ ಪರೀಕ್ಷೆ

ಮಂಗಳೂರು, ಮಾ.9: ಕೊರೋನ ವೈರಸ್ ರಾಜ್ಯದಲ್ಲೂ ಹರಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪರೀಕ್ಷೆಗಳ ವೇಳಾಪಟ್ಟಿ ಬದಲಾಯಿಸಿ ಆದೇಶ ಹೊರಡಿಸಿದೆ.

ಅದರಂತೆ 1 ರಿಂದ 5ನೇ ತರಗತಿವರೆಗಿನ ವಾರ್ಷಿಕ/ಸೆಮಿಸ್ಟರ್ ಪರೀಕ್ಷೆಗಳನ್ನು ಮಾ.11ರಿಂದ 16ರೊಳಗೆ ಮತ್ತು 6ರಿಂದ 9ನೇ ತರಗತಿಯ ಪರೀಕ್ಷೆಗಳನ್ನು ಮಾರ್ಚ್ 23ರೊಳಗೆ ಕಡ್ಡಾಯವಾಗಿ ಮುಗಿಸಬೇಕು. ಆ ಬಳಿಕ ಮಕ್ಕಳಿಗೆ ರಜೆ ಕೊಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ.

ಕೊರೋನ ವೈರಸ್ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲೆಯ ಎಲ್ಲಾ ಡಿಡಿಪಿಐಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದ ಆಯುಕ್ತರು 1ರಿಂದ 9ನೆ ತರಗತಿಯ ಪರೀಕ್ಷೆಗಳನ್ನು ಕಾಲಮಿತಿಯೊಳಗೆ ನಡೆಸಲು ನಿರ್ದೇಶನ ನೀಡಿದ್ದಾರೆ. ಆದರೆ ಎಸೆಸ್ಸೆಲ್ಸಿ ಪರೀಕ್ಷೆಯನ್ನು ನಿಗದಿತ ದಿನಾಂಕದಲ್ಲೇ ನಡೆಸಲು ಸೂಚಿಸಿದ್ದಾರೆ.

ಉಳಿದಂತೆ ಶಾಲಾ ದಿನಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಪ್ರಾರ್ಥನಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಮತ್ತು ಯಾವುದೇ ವಿದ್ಯಾರ್ಥಿಗಳಲ್ಲಿ ಜ್ವರ, ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆ ಕಂಡು ಬಂದಲ್ಲಿ ಅಂತಹವರಿಗೆ ತಕ್ಷಣ ಆರೋಗ್ಯ ಇಲಾಖೆಯು ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕಡ್ಡಾಯವಾಗಿ ಅವರಿಗೆ ರಜೆ ನೀಡಬೇಕು ಎಂದು ನಿರ್ದೇಶಿಸಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಬಯಸಿದ್ದಲ್ಲಿ ಅದಕ್ಕೆ ಅನುಮತಿ ನೀಡಲು ಕೂಡ ಆಯುಕ್ತರು ತಿಳಿಸಿದ್ದಾರೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ರಜೆ

ಮುನ್ನೆಚ್ಚರಿಕೆಯ ಕ್ರಮವಾಗಿ ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಎಲ್ಲಾ ಪೂರ್ವ ಪ್ರಾಥಮಿಕ, ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಸೂಚನೆ ಬರುವವರೆಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News