ಕೊರೊನ ವೈರಸ್ ಭೀತಿ, ತೈಲ ದರ ಕುಸಿತ: ಒಂದೇ ದಿನ ಸೆನ್ಸೆಕ್ಸ್ 1,942 ಅಂಕ ಕುಸಿತ

Update: 2020-03-09 16:29 GMT

ಹೊಸದಿಲ್ಲಿ, ಮಾ.9: ವಿಶ್ವದಾದ್ಯಂತ ಹಾವಳಿ ಎಬ್ಬಿಸಿರುವ ಕೊರೊನ ವೈರಸ್‌ನ ಆತಂಕ ಹಾಗೂ ರಶ್ಯ-ಸೌದಿ ಅರೇಬಿಯಾ ದರ ಸಮರದಿಂದ ಕುಸಿತ ಕಂಡಿರುವ ತೈಲ ದರದ ಪರಿಣಾಮ ಸೋಮವಾರ ಶೇರು ಮಾರುಕಟ್ಟೆಯ ವ್ಯವಹಾರ 5%ದಷ್ಟು ಕುಸಿತ ಕಂಡಿದೆ. 

ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್‌ನಲ್ಲಿ ಸೋಮವಾರ ದಿನದಾಂತ್ಯಕ್ಕೆ ಸಂವೇದಿ ಸೂಚ್ಯಾಂಕದಲ್ಲಿ 1,942 ಅಂಕಗಳಷ್ಟು ಇಳಿಕೆಯಾಗಿದ್ದು 35,635ಕ್ಕೆ ತಲುಪಿದೆ. ಎನ್‌ಎಸ್‌ಇ ನಿಪ್ಟಿ 646.95 ಅಂಕಗಳಷ್ಟು ಇಳಿಕೆಯಾಗಿ ದಿನದ ಅಂತ್ಯಕ್ಕೆ 10,342.50 ಅಂಕಕ್ಕೆ ತಲುಪಿದೆ. 2015ರ ಆಗಸ್ಟ್ ಬಳಿಕ , ಒಂದೇ ದಿನದ ವ್ಯವಹಾರದಲ್ಲಿ ಸೆನ್ಸೆಕ್ಸ್ ದಾಖಲಿಸಿರುವ ಅತ್ಯಂತ ಗರಿಷ್ಟ ಕುಸಿತ ಇದಾಗಿದೆ. 30 ಪ್ಯಾಕ್ ಬೆಂಚ್‌ಮಾರ್ಕ್ ಸೂಚ್ಯಂಕದಲ್ಲಿ ಬಹುತೇಕ ಶೇರುಗಳು ಕೆಂಪು ಬಣ್ಣಕ್ಕೆ ತಿರುಗಿದವು. ತೈಲ ಮಾರುಕಟ್ಟೆ ಸಂಸ್ಥೆಗಳು ಹಾಗೂ ಬ್ಯಾಂಕಿಂಗ್ ಸಂಸ್ಥೆಗಳ ಶೇರುಗಳ ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಭಾರೀ ಕುಸಿದ ಹಿನ್ನೆಲೆಯಲ್ಲಿ ಕಚ್ಛಾತೈಲ ಅನ್ವೇಷಿಸುವ ಸಂಸ್ಥೆಗಳ ಶೇರುಗಳ ಮೌಲ್ಯವೂ ಗಮನಾರ್ಹವಾಗಿ ಕಡಿಮೆಯಾಗಿದೆ. 2018ರ ಬಳಿಕ ನಿಫ್ಟಿಯೂ ಅತ್ಯಂತ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಇಂಡಸ್ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್‌ಗಳ ಶೇರುಗಳ ಮೌಲ್ಯ 5ರಿಂದ 8% ದಷ್ಟು ಕುಸಿದಿದೆ. ಟಾಟಾ ಸ್ಟೀಲ್, ಟಿಸಿಎಸ್, ಇನ್ಫೋಸಿಸ್, ಬಜಾಜ್ ಆಟೋ, ಎಲ್ ಆ್ಯಂಡ್ ಟಿ ಕಂಪೆನಿಗಳ ಶೇರುಗಳ ಮೌಲ್ಯವೂ 5ರಿಂದ 8%ದಷ್ಟು ಕುಸಿದಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಶೇರುಗಳ ಮೌಲ್ಯ 12.35% ಕುಸಿದರೆ, ಸರಕಾರಿ ಸ್ವಾಮ್ಯದ ಒಎನ್‌ಜಿಸಿಯ ಶೇರುಗಳ ಮೌಲ್ಯ 16.2% ಕುಸಿದಿದೆ. ಕಳೆದೆರಡು ವ್ಯವಹಾರದ ಅವಧಿಯಲ್ಲಿ ಹೂಡಿಕೆದಾರರು ಒಟ್ಟು ಸುಮಾರು 10 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News