ಮಧ್ಯಪ್ರದೇಶದಲ್ಲಿ ಹೈಡ್ರಾಮ: ಬೆಂಗಳೂರಿಗೆ ಹಾರಿದ 6 ಸಚಿವರು ಸಹಿತ 17 ಕಾಂಗ್ರೆಸ್ ಶಾಸಕರು

Update: 2020-03-09 16:43 GMT

ಹೊಸದಿಲ್ಲಿ, ಮಾ. 9: ಕಾಂಗ್ರೆಸ್‌ನ ಮಾಜಿ ಸಂಸದ ಹಾಗೂ ಗಾಂಧಿ ಕುಟುಂಬದ ನಿಕಟವರ್ತಿ ಜ್ಯೋತಿರಾದಿತ್ಯ ಸಿಂಧ್ಯ ಆಪ್ತ 5 ಸಚಿವರು ಸೇರಿದಂತೆ ಕಾಂಗ್ರೆಸ್‌ನ 17 ಮಂದಿ ಶಾಸಕರು ವಿಶೇಷ ವಿಮಾನದಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಈ ನಡೆಯಿಂದ ಮಧ್ಯಪ್ರದೇಶದ ಆಡಳಿತರೂಡ ಕಾಂಗ್ರೆಸ್ ಸರಕಾರ ಬಿಕ್ಕಟ್ಟಿಗೆ ಸಿಲುಕಿದೆ. ಫಾಲ್ಕನ್ 2000 ವಿಮಾನದಲ್ಲಿ ಬೆಳಗ್ಗೆ 8 ಗಂಟೆಗೆ ದಿಲ್ಲಿಯಿಂದ ನಿರ್ಗಮಿಸಿರುವ ಈ ನಾಯಕರು ಬೆಳಗ್ಗೆ 10.40ಕ್ಕೆ ಬೆಂಗಳೂರಿಗೆ ತಲುಪಿ ಮಾರತಹಳ್ಳಿಯ ಖಾಸಗಿ ಹೊಟೋಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಎಲ್ಲಾ ನಾಯಕರ ಫೋನ್‌ಗಳು ಸ್ವಿಚ್ ಆಫ್ ಆಗಿವೆ ಎಂದು ವರದಿ ಹೇಳಿದೆ.

 ಈ ಶಾಸಕರಲ್ಲಿ ಕಾಂಗ್ರೆಸ್ ಸಚಿವ ತುಲ್ಸಿ ಸಿಲಾವತ್ ಅವರ ಪುತ್ರ ಬಂಕಿಮ್ ಸಿಲಾವತ್, ಸಿಂಧ್ಯ ಅವರ ನಿಕಟವರ್ತಿ ಪುರುಷೋತ್ತಮ್ ಪರಾಶರ, ರಾಜ್ಯವರ್ಧನ್ ಸಿಂಗ್, ಪ್ರದ್ಯುಮ್ನ ಸಿಂಗ್ ತೋಮರ್, ಗಿರಿರಾಜ್, ರಕ್ಷಾ ಸಿನೋರಿಯಾ, ಜಸ್ವಂತ್ ಜಾಟವ್, ಸುರೇಶ್ ಧಾಕಡ್, ಜಜ್ಪಾಲ್ ಸಿಂಗ್ ಹಾಗೂ ಬ್ರಿಜೇಂದ್ರ ಯಾದವ್ ಮೊದಲಾದವರು ಸೇರಿದ್ದಾರೆ.

ಮುಖ್ಯಮಂತ್ರಿ ಕಮಲ್‌ನಾಥ್ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಹೊಸದಿಲ್ಲಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ರಾಜ್ಯದ ಪ್ರಸಕ್ತ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದ ಬಳಿಕ ಈ ಅಚ್ಚರಿಯ ಬೆಳವಣಿಗೆ ನಡೆದಿದೆ. ಕಳೆದ ವಾರ ಕಾಂಗ್ರೆಸ್‌ನ 12 ಶಾಸಕರು ದಿಲ್ಲಿ ಸಮೀಪದ ಪಂಚತಾರ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದರು ಹಾಗೂ ರಾಜ್ಯದಲ್ಲಿರುವ ಅಲ್ಪ ಬಹುಮತ ಇರುವ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಈ ಸಂದರ್ಭ 10 ಶಾಸಕರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಅನಂತರ 8 ಮಂದಿ ಹಿಂದಿರುಗಿದ್ದರು. ಆದರೆ, ಇಬ್ಬರು ಶಾಸಕರಾದ ರಘುರಾಜ್ ಸಿಂಗ್ ಕನ್ಸಾನಾ ಹಾಗೂ ಹರ್ದೀಪ್ ಸಿಂಗ್ ದಾಂಗ್ ಇದುವರೆಗೆ ಪತ್ತೆಯಾಗಿಲ್ಲ. ಆದರೆ, ದಾಂಗ್ ಸ್ಪೀಕರ್ ಕಮಲ್‌ನಾಥ್ ಅವರಿಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದರು.

 ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದ ಬಳಿಕ ಮುಖ್ಯಮಂತ್ರಿ ಹುದ್ದೆಗಾಗಿ ಕಮಲ್‌ನಾಥ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಕಮಲ್‌ನಾಥ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿತ್ತು. 17 ಶಾಸಕರು ನಾಪತ್ತೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಕಮಲ್‌ನಾಥ್ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಈ ಪಕ್ಷದ ಸಭೆಯಲ್ಲಿ ಪಕ್ಷದ ಹಿರಿಯರಾದ ದಿಗ್ವಿಜಯ್ ಸಿಂಗ್ ಕೂಡ ಪಾಲ್ಗೊಂಡಿದ್ದರು. ಈ ನಡುವೆ ಕಮಲ್‌ನಾಥ್ ಸರಕಾರವನ್ನು ಪತನಗೊಳಿಸಲು ಬಿಜೆಪಿ ಆಪರೇಶನ್ ಕಮಲ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ, ಬಿಜೆಪಿ ಈ ಆರೋಪವನ್ನು ನಿರಾಕರಿಸಿದ್ದು, ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News